ಚರಂಡಿ ಮೇಲೆಯೇ ಕಂಪೌಂಡ್ ನಿರ್ಮಾಣ ಆರೋಪ: ರೊಚ್ಚಿಗೆದ್ದ ಸಾರ್ವಜನಿಕರಿಂದ ರಸ್ತೆ ಅಗೆದು ಪ್ರತಿಭಟನೆ
ಕುಂದಾಪುರ: ಸಾರ್ವಜನಿಕ ರಸ್ತೆಬದಿಯ ಚರಂಡಿ ಮೇಲೆಯೇ ಆವರಣಗೋಡೆ ನಿರ್ಮಿಸಲಾಗಿದ್ದು, ಇದರಿಂದ ಸಾರ್ವಜನಿಕ ಓಡಾಟಕ್ಕೆ ತೊಂದರೆಗಳಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಕುಂದಾಪುರದ ಗುಲ್ವಾಡಿ ಗ್ರಾಮಪಂಚಾಯತ್ನಲ್ಲಿ ಬುಧವಾರ ನಡೆದಿದೆ.
ಇಲ್ಲಿನ ಗುಲ್ವಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬೋಳುಕಟ್ಟೆ-ಚಿಕ್ಕಪೇಟೆ ರಸ್ತೆ ಪ್ರವೇಶದಲ್ಲಿ ಮಣ್ಣನ್ನು ಅಗೆದು ರಸ್ತೆ ಬಂದ್ ಮಾಡಿ ಪಂಚಾಯತ್ ಎದುರು ಜಮಾಯಿಸಿದ ಸ್ಥಳೀಯರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಲವತ್ತು ವರ್ಷಕ್ಕೂ ಅಧಿಕ ವರ್ಷಗಳಿಂದ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದೇವೆ. ಎಲ್ಲರೂ ಅವರವರ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟಿದ್ದಾರೆ. ಗೋಪಾಲ ಪೂಜಾರಿಯವರು ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರಿ ಅನುದಾನದಲ್ಲಿ ಇದೇ ರಸ್ತೆಯ ತುದಿಗೆ ಕಾಂಕ್ರೀಟಿಕರಣ ಮಾಡಿದ್ದಾರೆ. ರಸ್ತೆಯ ಸಂಪೂರ್ಣ ನಿರ್ವಹಣೆ ಪಂಚಾಯತ್ ಮಾಡುತ್ತಿದೆ. ಇಷ್ಟೆಲ್ಲಾ ಇರುವಾಗ ವ್ಯಕ್ತಿಯೊಬ್ಬರು ಚರಂಡಿ ಮೇಲೆಯೇ ತಡೆಗೋಡೆ ನಿರ್ಮಿಸಿ ನೀರು ಸರಾಗವಾಗಿ ಹೋಗದಂತೆ ತಡೆದಿದ್ದಾರೆ. ಪರಿಣಾಮ ನೀರು ರಸ್ತೆಯ ಮೇಲೆ ಹರಿದು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದೇ ರಸ್ತೆಯಲ್ಲಿ ಹಾಲುಡೈರಿ ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಇದೆ. ನಾಲ್ಕು ವಾರ್ಡ್ಗೆ ಇರೋದು ಒಂದೇ ರುದ್ರಭೂಮಿ. ಇವೆಲ್ಲದಕ್ಕೂ ತುಂಬಾ ತೊಂದರೆಗಳಾಗುತ್ತಿದೆ. ಇವ್ಯಾವುದಕ್ಕೂ ತೊಡಕಾಗದಂತೆ ಕೂಡಲೇ ಪಂಚಾಯತ್ ಚರಂಡಿ ಮೇಲೆ ನಿರ್ಮಿಸಿರುವ ಆವರಣಗೋಡೆಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಅವಕಾಶ ಮಾಡಿಕೊಬೇಕು. ಇಲ್ಲವಾದಲ್ಲಿ ಬಂದ್ ಮಾಡಿರುವ ರಸ್ತೆಯನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಸ್ಥಳೀಯರು ಎಚ್ಚರಿಸಿದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಹೊರಗೆ ಬಂದು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದ ಸ್ಥಳೀಯರು ಸ್ಥಳಕ್ಕೆ ಪಂಚಾಯತ್ ನೋಡಲ್ ಅಧಿಕಾರಿ ಬರಬೇಕೆಂದು ಪಟ್ಟುಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ನೋಡಲ್ ಅಧಿಕಾರಿ ಕುಸುಮಾಕರ್ ಶೆಟ್ಟಿ, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈಗಾಗಲೇ ಚರಂಡಿ ಮೇಲೆ ಕಂಪೌಂಡ್ ನಿರ್ಮಿಸಿರುವುದರ ಬಗ್ಗೆ ನೋಟೀಸ್ ನೀಡಲಾಗಿದ್ದು, ಈ ಬಗ್ಗೆ ತಹಸೀಲ್ದಾರ್ ಜೊತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ಆದರೆ ಸಾರ್ವಜನಿಕ ರಸ್ತೆ ಬಂದ್ ಮಾಡಿದ್ದನ್ನು ಮಾತ್ರ ತೆರವುಗೊಳಿಸಬೇಕು ಎಂದು ಸೂಚಿಸಿದರು. ಇದಕ್ಕೊಪ್ಪದ ಸ್ಥಳೀಯರು ಮೊದಲು ಕಂಪೌಂಡ್ ತೆರವುಗೊಳಿಸಿ ನೀರು ಹರಿಯಲು ಅವಕಾಶ ಮಾಡಿಕೊಡಿ. ಈ ಬಗ್ಗೆ ಸಾಕಷ್ಟು ಮನವಿ ನೀಡಿದ್ದೇವೆ. ಸಾಕಷ್ಟು ವರ್ಷಗಳಿಂದ ಸಮಸ್ಯೆಯಲ್ಲಿರುವ ರಸ್ತೆಯನ್ನು ಇದುವರೆಗೂ ಯಾರೂ ಸರಿಪಡಿಸಿಲ್ಲ. ಚುನಾವಣೆ ಬಂದಾಗ ನಮಗೆ ಆಶ್ವಾಸನೆ ನೀಡಿ ಹೋಗುವ ಜನಪ್ರತಿನಿಧಿಗಳು ಮತ್ತೆ ಈ ಕಡೆ ತಲೆ ಹಾಕೋದಿಲ್ಲ. ನಮಗೆ ಮನವಿ ಕೊಟ್ಟು ಸಾಕಾಗಿದೆ. ಕೂಡಲೇ ರಸ್ತೆ ಮೇಲಿನ ಆವರಣಗೋಡೆಯನ್ನು ತೆರವುಗೊಳಿಸಿ ಎಂದು ಸ್ಥಳೀಯರು ಒತ್ತಾಯಿಸಿದರು. ತಾತ್ಕಾಲಿಕವಾಗಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇವೆಂದು ನೋಡಲ್ ಅಧಿಕಾರಿ ಕುಸುಮಾಕರ್ ಶೆಟ್ಟಿ ಪ್ರತಿಭನಾಕಾರರ ಮನವೊಲಿಸಿದ ಬಳಿಕ ಸ್ಥಳೀಯರು ಬಂದ್ ಮಾಡಲಾಗಿರುವ ರಸ್ತೆಯನ್ನು ತೆರವುಗೊಳಿಸಿದರು ಒಪ್ಪಿದರು.
ಈ ಸಂದರ್ಭದಲ್ಲಿ ಪಿಡಿಓ ವನಿತಾ ಶೆಟ್ಟಿ, ಮಾಜಿ ಗ್ರಾ.ಪಂ ಸದಸ್ಯ ಹನೀಫ್, ಗ್ರಾಮಸ್ಥ ಸುರೇಂದ್ರ ಮೊದಲಾದವರು ಉಪಸ್ಥಿತರಿದ್ದರು.