ಚರ್ಚ್ ಮೇಲೆ ಬಾಂಬ್ ದಾಳಿ, ದಾಂಧಲೆ: ಆರೋಪ – ಮೂವರ ಬಂಧನ
ಕೊಲ್ಕತ್ತಾ: ಕಳೆದ ಶನಿವಾರ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಭಗವಾನ್ಪುರ್ ಎಂಬಲ್ಲಿ `ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಾ ಚರ್ಚ್ ಕಟ್ಟಡದತ್ತ ಬಾಂಬ್ ಎಸೆದಿದ್ದ ಹಾಗೂ ಚರ್ಚ್ ನಲ್ಲಿ ದಾಂಧಲೆಗೈದ ಆರೋಪದಲ್ಲಿ ಎಂಟು ಮಂದಿ ದುಷ್ಕರ್ಮಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಚರ್ಚಿನ ಪ್ಯಾಸ್ಟರ್ ಅಲೋಕ್ ಘೋಷ್ ಅವರು ದಾಳಿ ಕುರಿತು ದೂರು ದಾಖಲಿಸಿದ್ದು ಆರೋಪಿಗಳು ಬಿಜೆಪಿ ಹಾಗೂ ಆರೆಸ್ಸಿಸ್ಸಿನವರು ಎಂದು ಆರೋಪಿಸಿದ್ದಾರೆ.
ಶನಿವಾರ ಅಪರಾಹ್ನದ ಹೊತ್ತಿಗೆ ಚರ್ಚಿನಲ್ಲಿ ಹಲವರಿದ್ದ ವೇಳೆ ಕಟ್ಟಡದ ಹೊರಗೆ ಎರಡು ಬಾಂಬುಗಳನ್ನು ಸ್ಫೋಟಿಸಲಾಗಿತ್ತು. ಅಲ್ಲಿದ್ದ ಜನರು ಚೆಲ್ಲಾಪಿಲ್ಲಿಯಾಗುತ್ತಿದ್ದಂತೆಯೇ ದುಷ್ಕರ್ಮಿಗಳು ಚರ್ಚ್ ನೊಳಗೆ ಹೊಕ್ಕು ಅಲ್ಲಿ ದಾಂಧಲೆಗೈದಿದ್ದರು. ಹದಿನೈದು ನಿಮಿಷಗಳ ಕಾಲ ಅವರು ಚರ್ಚ್ ನೊಳಗಿದ್ದು ನಂತರ ಹೊರಗಿದ್ದ ಪ್ಯಾಸ್ಟರ್ ಅವರ ಕಾರನ್ನು ಹಾನಿಗೊಳಿಸಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.