ಚಲೋ ಉಡುಪಿ ಮತ್ತು ಸ್ವಾಭಿಮಾನಿ ಸಂಘರ್ಶ ಸಮಾವೇಶಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ : ಪಿ ವಿ ಮೋಹನ್
ಮಂಗಳೂರು: ಕರಾವಳಿ ಕರ್ನಾಟಕ ಕೋಮುವಾದಿಗಳನ್ನು ಗುರಿಯಿಟ್ಟು ದಲಿತರು ಸಂಘಟಿಸಿದ ಚಲೋ ಉಡುಪಿ ಜಾಥಕ್ಕೂ, ತದ ನಂತರ ನಡೆದ ದಲಿತ ಸ್ವಾಭಿಮಾನಿ ಸಂಘರ್ಷ ಸಮಾವೇಶಕ್ಕೂ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಸಮಾವೇಶದಲ್ಲಿ ದಲಿತರು ಮತ್ತು ಇತರರು ಎತ್ತಿದ ಜಮೀನಿನ ಹಂಚಿಕೆ, ಆಹಾರದ ಹಕ್ಕು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಮುಂತಾದ ಪ್ರಶ್ನೆಗಳ ಬಗ್ಗೆ ಸಂಪೂರ್ಣವಾದ ಸಹಮತವಿದೆ. ಅದಕ್ಕಾಗಿ ದಲಿತರ ಪರವಾಗಿ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸರಕಾರವನ್ನು ಕಾಂಗ್ರೆಸ್ ಪಕ್ಷ ಒತ್ತಾಯಿಸಲಿದೆ. ಆದರೆದಲಿತ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿಯು ಸಮಾವೇಶದ ಮೂಲ ಉದ್ದೇಶವನ್ನು ತಿರುಚಿ ಕೆಟ್ಟರಾಜಕೀಯ ಲಾಭಕ್ಕೋಸ್ಕರ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಸಂಘ ಪರಿವಾರದವರು ನೀಡುತ್ತಿರುವ ಅವಹೇಳನಕಾರಿ ಹೇಳಿಕೆಗಳು ತೀರಾ ಬೇಜಾವಾಬ್ದಾರಿಯಿಂದ ಮತ್ತು ದುರುದ್ದೇಶದಿಂದ ಕೂಡಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಎಐಸಿಸಿ ಸದಸ್ಯ ಪಿ.ವಿ. ಮೋಹನ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಅವರು ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ದ್ವಾರಕನಾಥಾಗಲಿ, ದಿನೇಶ್ಅಮೀನ್ ಮಟ್ಟಾಗಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದವರಲ್ಲ. ಅವರೆಲ್ಲರೂ ರಾಜ್ಯ ಗುರುತಿಸಿಕೊಂಡಿರುವ ಚಿಂತಕರು ಹಾಗೂ ಸಾಮಾಜಿಕ ಕ್ಷೇತ್ರದ ಧುರೀಣರು. ಅವರ ಹೆಸರನ್ನು ಕಾಂಗ್ರೆಸ್ಸಿನೊಂದಿಗೆ ತಳಕು ಹಾಕುವುದು ಕೆಟ್ಟ ರಾಜಕಾರಣ ಮತ್ತು ಅದು ಬಿಜೆಪಿ ಪಕ್ಷದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.
ಒಂದು ಸಮಾಜವನ್ನು ಮತ್ತೊಂದು ಸಮಾಜದ ವಿರುದ್ಧ ಎತ್ತಿ ಕಟ್ಟುವ ಮೂಲಕ ಸಮಾಜವನ್ನು ವಿಭಜಿಸುವುದು ಯಾರೆಂದು ಜನತೆಗೆ ಗೊತ್ತಿದೆ. ಪ್ಯಾಸಿಷ್ಟ್ ಧೋರಣೆಯ ಹಿಟ್ಲರ್ ಸಂಸ್ಕ್ರತಿಯನ್ನು ಆಳವಡಿಸಿದ ಪಕ್ಷ ಯಾವುದು, ಇಡೀ ದೇಶದಾದ್ಯಂತ ಭೀತಿ ಹುಟ್ಟಿಸಿರುವ ತಥಾಕಥಿತ ಗೋರಕ್ಷಕರು ಇರುವ ಪಕ್ಷ ಯಾವುದು ಎಂಬುದೆಲ್ಲಾ ಇಡೀ ದೇಶಕ್ಕೆ ಗೊತ್ತಿದೆ. ಅಭಿವೃದ್ಧಿ ರಾಜಕಾರಣದ ಹೆಸರಲ್ಲಿಅಧಿಕಾರಕ್ಕೆ ಬಂದರು. ಅದು ಮೊದಲು ಮಾಡಲಿ.
ಪಂಕ್ತಿ ಭೇದ ಅದು ರಾಜಕೀಯ ಪ್ರಶ್ನೆಅಲ್ಲ. ಮಠದ ಮುತ್ತಿಗೆ ವಿಷಯ ಕೂಡ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಧುರೀಣರು ಕೂತು ಚರ್ಚೆ ಮಾಡುವ ವಿಷಯ ಹೊರತು ಬೀದಿಗೆ ತರುವುದು ಸರಿಯಲ್ಲ. ಮುತ್ತಿಗೆ ಹಾಕುವುದು ಒಂದು ಸಂಕೇತವೆಂದು ತಿಳಿದುಕೊಂಡರೆ ಸಮಸ್ಸೆಗೆ ಪರಿಹಾರ ಸಿಗುತ್ತದೆ. ಸಂಕೇತದ ಹಿಂದೆ ದಲಿತ ಸಮುದಾಯದ ಕಾಳಜಿ ಮತ್ತು ಕಳಕಳಿಯನ್ನು ಅರ್ಥಮಾಡಬೇಕಾಗಿದೆ. ಬ್ರಹ್ಮಶ್ರೀ ನಾರಾಯಣಗುರು ವಿಗ್ರಹದ ಬದಲು ಬಿಂಬ ಪ್ರತಿಷ್ಠಾಪಿಸಿದ್ದು ಕೂಡ ಒಂದು ಸಂಕೇತದ ಭಾಗವಾಗಿದೆ.
ಪೇಜಾವರ ಶ್ರೀಗಳು ವಿಶ್ವ ಹಿಂದು ಪರಿಷತ್ತಿನ ರಾಷ್ಟ್ರಿಯ ಉಪಾಧ್ಯಕ್ಷರು ಆಗಿದ್ದರೂ ಕೂಡ ಕಾಂಗ್ರೆಸ್ಸಿನ ಹಲವು ಹಿರಿಯ ನಾಯಕರು ಅವರ ಜತೆ ಅನೋನ್ಯ ಸಂಬಂದವಿಟ್ಟು ಕೊಂಡಿದಾರೆ. ಅವರ ದೀನದಲಿತರ ಕೆಲಸದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅಪಾರ ಗೌರವ ಇದೆ. ಸ್ವಾಮಿವಿವೇಕಾನಂದರು ಹಿಂದೂ ಧರ್ಮವನ್ನು ತಮ್ಮ ಕ್ರಾಂತಿಕಾರಕ ವಿಚಾರದಿಂದ ಹೇಗೆ ಶುದ್ಧೀಕರಣ ಗೊಳಿಸಲು ಪ್ರಯತ್ನಿಸಿದ್ದಾರೋ ಅದೇ ರೀತಿಯಲ್ಲಿ ಶ್ರೀಗಳು ಮುಂದೆ ಮಾಡಲಿದ್ದಾರೆ ಎಂಬ ಆಶಾಭಾವನೆಯನ್ನು ಕಾಂಗ್ರೆಸ್ ಹೊಂದಿದೆ. ಶ್ರೀಗಳು ಅಪೇಕ್ಷೆ ಪಟ್ಟು ಚರ್ಚೆಗೆ ಆಹ್ವಾನ ನೀಡಿದರೆ ಕಾಂಗ್ರೆಸ್ ಪಕ್ಷವು ಸಕಾರಾತ್ಮಕವಾಗಿ ಸ್ಪಂದಿಸಲಿದೆಎಂದು ಮೋಹನ್ ಹೇಳಿದ್ದಾರೆ.