Home Mangalorean News Kannada News ಚಾಲನಾ ಪರವಾನಗಿ ನೀಡುವ ಮುನ್ನ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿ- ಜಿಲ್ಲಾಧಿಕಾರಿ ಜಿ.ಜಗದೀಶ್

ಚಾಲನಾ ಪರವಾನಗಿ ನೀಡುವ ಮುನ್ನ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿ- ಜಿಲ್ಲಾಧಿಕಾರಿ ಜಿ.ಜಗದೀಶ್

Spread the love

ಚಾಲನಾ ಪರವಾನಗಿ ನೀಡುವ ಮುನ್ನ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಿ- ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ:  ಅಂಕಿ ಅಂಶಗಳ ಪ್ರಕಾರ ಶೇ.78 ರಷ್ಟು ಅಪಘಾತ ಪ್ರಕರಣಗಳಿಗೆ ವಾಹನ ಚಾಲಕರೇ ಕಾರಣವಾಗಿದ್ದು, ಸಾರಿಗೆ ಇಲಾಖೆಯ ಮೂಲಕ ವಾಹನ ಚಾಲನಾ ಪರವಾನಗಿ ನೀಡುವ ಮುನ್ನ, ಚಾಲಕರಿಗೆ ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಪಾಲನೆ ಕುರಿತು ವಿವರವಾದ ತರಬೇತಿ ನೀಡುವ ಮೂಲಕ ಅಪಘಾತ ಪ್ರಕರಣಗಳು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಅಪಘಾತದಿಂದ ಮರಣ ಹೊಂದುವ ವ್ಯಕ್ತಿಯ ಕುಟುಂಬ ಎದುರಿಸುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಇಲ್ಲದವರು ಹಾಗೂ ವಾಹನ ಚಾಲನೆಗೆ ಸೂಕ್ತ ಅರ್ಹತೆ ಇಲ್ಲದ ವ್ಯಕಿಗಳು ಚಾಲನಾ ಪರವಾನಗಿ ಪಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆದು, ಸಾರ್ವಜನಿಕರು ಮತ್ತು ಚಾಲಕರ ಮರಣಗಳು ಸಂಭವಿಸುತ್ತಿದ್ದು, ಇದನ್ನು ತಪ್ಪಿಸಲು ಪ್ರಸ್ತುತ ಚಾಲನಾ ಪರವಾನಗಿ ನೀಡಲು ನಡೆಸುತ್ತಿರುವ ಪರೀಕ್ಷೆಯ ಜೊತೆಗೆ, ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸುರಕ್ಷಿತ ಸಂಚಾರಿ ನಿಯಮಗಳ ಪಾಲನೆ ವಿವರವಾದ ಮಾಹಿತಿಯನ್ನು ಹಾಗೂ ಅಪಘಾತದಿಂದ ಮರಣ ಹೊಂದುವ ಕುಟುಂಬಗಳು ಎದುರಿಸಬಹುದಾದ ಸಂಕಷ್ಟಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಇದೆ ಆದರೂ ಸಹ ಸುರಕ್ಷಿತ ಸಂಚಾರ ನಿಯಮಗಳ ಪಾಲನೆ ಕುರಿತು ಮಾಹಿತಿ ನೀಡಲು, ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹೊರಗುತ್ತಿಗೆ ಮೇಲೆ ಸೂಕ್ತ ಅಭ್ಯರ್ಥಿಯನ್ನು ನೇಮಕ ಮಾಡಿಕೊಂಡು ಮಾಹಿತಿ ನೀಡುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಜಿಲ್ಲೆಯಲ್ಲಿ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಸೂಕ್ತ ಎಚ್ಚರಿಕಾ ಕ್ರಮಗಳನ್ನು ಅಳವಡಿಸುವ ಕುರಿತಂತೆ ಕ್ರಿಯಾ ಯೋಜನೆ ರೂಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಜಿಲ್ಲೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಅಗತ್ಯವಿರುವಲ್ಲಿ ಜೀಬ್ರಾ ಕ್ರಾಸ್ ಅಳವಡಿಸಲು ಸೂಚನೆ ನೀಡಲಾಗಿದೆ, ಮೀನುಗಾರಿಕಾ ವಾಹನಗಳು ರಸ್ತೆಯಲ್ಲಿ ನೀರು ಚೆಲ್ಲಿದರೆ ದಂಡ ವಿಧಿಸುವುದರ ಜೊತೆಗೆ ಅವರು ಆ ನೀರನ್ನು ಸೂಕ್ತ ಪ್ರದೇಶದಲ್ಲಿ ವಿಸರ್ಜಿಸಲು ಸ್ಥಳ ನಿಗಧಿಪಡಿಸಬೇಕಿದೆ, 108 ಅಂಬುಲೈನ್ಸ್ ವಾಹನಗಳ ಸ್ಪಂದನೆಯ ಅವಧಿ ಕಡಿಮೆ ಇದ್ದು, ಕರೆ ಬಂದ ಕೂಡಲೇ ಸ್ಪಂದಿಸುವ ಅವಧಿ ಕುರಿತು ಸಂಬಂದಪಟ್ಟ ಸಂಸ್ಥೆಗೆ ಸೂಚಿಸುವಂತೆ ಡಿ.ಹೆಚ್.ಓ ಗೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ವಾಹನ ಚಾಲಕರು ಸ್ವಯಂ ಪ್ರೇರಿತರಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

ಎಎಸ್ಪಿ ಕುಮಾರ ಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಕಡಿಮೆ ಇವೆ ಆದರೆ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಅಧಿಕವಾಗಿದ್ದು, 2017 ರಲ್ಲಿ 225, 2018 ರಲ್ಲಿ 228 ಮತ್ತು 2019 ರಲ್ಲಿ 259 ಮಂದಿ ಅಪಘಾತದಿಂದ ಮರಣ ಹೊಂದಿದ್ದು, ಇದರಲ್ಲಿ ಯುವ ಜನತೆಯೇ ಅಧಿಕ, ಅಪ್ರಾಪ್ತರಿಗೆ ವಾಹನ ಚಾಲನೆ ನೀಡಿದಲ್ಲಿ ಪೋಷಕರೂ ಶಿಕ್ಷಗೆ ಒಳಗಾಗಬೇಕಾಗುತ್ತದೆ, ಕೇವಲ ದಂಡ ವಿಧಿಸುವುದರಿಂದ ಮಾತ್ರವೇ ಅಪಘಾತಗಳನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ, ಸ್ವಯಂ ಪ್ರೇರಿತವಾಗಿ ಕಾನೂನು ಮತ್ತು ಸುರಕ್ಷತಾ ನಿಯಮ ಪಾಲಿಸುವುದರಿಂದ ಅಪಘಾತ ನಿಯಂತ್ರಿಸಬಹುದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕೆ.ಎಂ.ಸಿ ಡಾ. ಕೃಷ್ಣ ಪ್ರಸಾದ್ ಮಾತನಾಡಿ, ಮಾನವ ತಪ್ಪಿನಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ದೇಶದಲ್ಲಿ ಪ್ರತಿ ವರ್ಷ ಇತರೆ ಕಾರಣಗಳಿಂದ ಮರಣ ಹೊಂದುವವರಿಗಿಂತ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಅತ್ಯಧಿಕವಾಗಿದ್ದು, ಇದರಲ್ಲಿ 18-35 ವರ್ಷದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದುತ್ತಿದ್ದು, ಇದರಿಂದ ಇಡೀ ಕುಟುಂಬ ಆಧಾರಸ್ಥಂಭವನ್ನು ಕಳೆದುಕೊಳ್ಳುವಂತಾಗಿದೆ, ಯುವಜನತೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದ ಅವರು, ಅಪಘಾತ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ವಿವರಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಉಪಸ್ಥಿತರಿದ್ದರು. ಸಭೆಯಲ್ಲಿ ಬಸ್ ಮಾಲೀಕರು, ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಪದಾಧಿಕಾರಿಗಳು, ಖಾಸಗಿ ಶಾಲೆಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version