ಚಿಕ್ಕಮಗಳೂರು ಎಸ್ಪಿಯಾಗಿ ಅಕ್ಷಯ್ ಎಂ.ಹಾಕೆ ಅಧಿಕಾರ ಸ್ವೀಕಾರ
ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್ ಎಂ.ಹಾಕೆ ಅವರು ಶನಿವಾರ ಅಧಿಕಾರ ವಹಿಸಿಕೊಂಡರು.
ಹಿಂದಿನ ಎಸ್ಪಿ ಹರೀಶ್ ಪಾಂಡೆ ಅವರನ್ನು ಬೆಂಗಳೂರಿಗೆ ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಕ್ಷಯ್ ಅವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆ ಯವರು. ಪುಣೆಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. 2015 ರ ಬ್ಯಾಚಿನ ಐಪಿಎಸ್ ಅಧಿಕಾರಿ.
ಕಲಬುರ್ಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಗುಪ್ತಚರ ವಿಭಾಗದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊದಲ ಬಾರಿಗೆ ಕಾರ್ಯಭಾರ ವಹಿಸಿ ಕೊಂಡಿದ್ದೇನೆ. ಚೆನ್ನಾಗಿ ಕಾರ್ಯನಿರ್ವ ಹಿಸುತ್ತೇನೆ’ ಎಂದು ಎಸ್ಪಿ ಅಕ್ಷಯ್ ಎಂದು ಮಾಧ್ಯಮಗಳಿಗೆ ವಿಶ್ವಾಸ ವ್ಯಕ್ತಪಡಿಸಿದರು.
ಹರೀಶ್ ಪಾಂಡೆ ಅವರು ಒಂದು ವರ್ಷ ಎಂಟು ತಿಂಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 2018ರ ಅಕ್ಟೋಬರ್ 17ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು. ಎರಡು ದತ್ತ ಜಯಂತ್ಯುತ್ಸವಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅಲ್ಲದೇ ಕೊರೊನಾ ಲಾಕ್ಡೌನ್ ಕಟ್ಟುನಿಟ್ಟಾಗಿ ನಿರ್ವಹಿಸಿದ್ದರು.
‘ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದು ತೃಪ್ತಿ ನೀಡಿದೆ. ಇಲ್ಲಿನ ಜನರು ತೋರಿದ ಪ್ರೀತಿ ಎಂದಿಗೂ ಮರೆಯಲಾಗಲ್ಲ’ ಎಂದು ಹರೀಶ್ ಪಾಂಡೆ ಹೇಳಿದರು.