ಚಿಕ್ಕಮಗಳೂರು ವಕೀಲ-ಪೊಲೀಸರ ಜಟಾಪಟಿ: ವಕೀಲರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ಜಟಾಪಟಿ ತಾರಕಕ್ಕೆ ಏರಿದೆ. ಹೆಲ್ಮೆಟ್ ಹಾಕದ ವಿಚಾರವಾಗಿ ವಕೀಲ ಪ್ರೀತಮ್ ಎಂಬುವರ ಮೇಲೆ ಶುಕ್ರವಾರ ಪೊಲೀಸರು ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಕೀಲರು ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಮಾಡಿದ್ದರು. ಹೀಗಾಗಿ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದ ವಕೀಲರ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
ವಕೀಲರು ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಹಲ್ಲೆ ಖಂಡಿಸಿ ಶನಿವಾರ ಮಧ್ಯರಾತ್ರಿವರೆಗೂ ನಗರದ ಹನುಮಂತಪ್ಪ ಸರ್ಕಲ್ನಲ್ಲಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುಧಾಕರ್, ವಕೀಲ ಪ್ರೀತಮ್ ಸೇರಿದಂತೆ 15 ವಕೀಲರ ವಿರುದ್ಧ ಸೆಕ್ಷನ್ 503, 406, 353, 149 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರತಿಭಟನೆಯಲ್ಲಿ ಪೋಲಿಸ್ ಸಂಘ ಸ್ಥಾಪನೆಯ ಕೂಗು ಕೇಳಿ ಬಂದಿದೆ. ಪೊಲೀಸ್ ಸಿಬ್ಬಂದಿಗಳು ನಮಗೂ ಸಂಘ ಬೇಕು ಎಂದು ಚರ್ಚೆ ನಡೆಸಿದರು. ಪೋಲಿಸ್ ಸಂಘ ಸ್ಥಾಪನೆಗೆ ಈ ಹಿಂದೆ ಹಿರಿಯ ಅಧಿಕಾರಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ನಿನ್ನೆ (ಡಿ.02)ರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಸಂಘ ಸ್ಥಾಪನೆಗೆ ಸಿದ್ದತೆ ನಡೆದಿದ್ದು, ಸಂಘವನ್ನು ರಿಜಿಸ್ಟರ್ ಮಾಡಿಸುವ ಬಗ್ಗೆ ಚರ್ಚೆ ನಡೆದಿದೆ. ಸೋಮವಾರ ರಿಜಿಸ್ಟರ್ ಮಾಡಿಸುವ ಸಾಧ್ಯತೆ ಇದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ವಲಯದ ಐಜಿಪಿ ಚಂದ್ರಗುಪ್ತ ಅವರಿಗೆ ಪೊಲೀಸ್ ಇಲಾಖೆಗೆ ಸಂಘ ಯಾಕಿಲ್ಲ ಎಂದು ಪೊಲೀಸರ ಕುಟುಂಬಸ್ಥರು ಪ್ರಶ್ನೆ ಮಾಡಿದರು. ಆಗ ಐಜಿಪಿ ಚಂದ್ರಗುಪ್ತ ಅವರು ಇದು ನಿಮಗೆ ಅರ್ಥವಾಗಲ್ಲವೆಂದು ಹೇಳಿದರು.
ಎಫ್ಐಆರ್ ದಾಖಲಾಗಿರುವ 6 ಸಿಬ್ಬಂದಿಯನ್ನು ಬಂಧಿಸಬಾರದು. ಪೊಲೀಸ್ ಸಿಬ್ಬಂದಿಯ ಅಮಾನತು ಆದೇಶ ಹಿಂಪಡೆಯಬೇಕು ಎಂದು ಡಿ.5ರವರೆಗೂ ಇಲಾಖೆಗೆ ಗಡುವು ನೀಡಿ ಪೊಲೀಸರು ಧರಣಿ ಹಿಂಪಡೆದರು. ಇನ್ನು ವಕೀಲರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಗುರುಪ್ರಸಾದ್ ಅವರನ್ನು ಡಿವೈಎಸ್ಪಿ ಶೈಲೇಂದ್ರ ಕುಮಾರ್ ಅವರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದರು.