ಚಿಕ್ಕ ವಿಷಯಕ್ಕೂ ಪ್ರತಿಕ್ರಿಯಿಸುವ ಉಡುಪಿ ಜಿಲ್ಲಾಧಿಕಾರಿ ಮರಳು ಹಗರಣ ವಿಚಾರದಲ್ಲಿ ಯಾಕೆ ಮೌನ – ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷವಿಶ್ವಾಸ್ ಅಮೀನ್ ಪ್ರಶ್ನೆ
ಉಡುಪಿ: ಯಾವುದೇ ಚಿಕ್ಕ ವಿಷಯಕ್ಕೂ ಕೂಡ ಪ್ರತಿಕ್ರಿಯೆ ನೀಡುವ ಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ನಡೆದಿರುವ ಬಹುಕೋಟಿ ಮರಳು ಹಗರಣದ ಕುರಿತು ಮೌನ ವಹಿಸಿರುವ ಕಾರಣವೇನು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಪ್ರಶ್ನಿಸಿದ್ದಾರೆ.
ಶಾಸಕರಾದ ರಘುಪತಿ ಭಟ್ ಅವರು ಲಾಕ್ ಡೌನ್ ಸಂದರ್ಭದಲ್ಲಿ ಬೆಳಿಗ್ಗೆ ಜನರಿಗೆ ಊಟವನ್ನು ನೀಡಿ ಆಮೇಲೆ ಪ್ರತಿನಿತ್ಯ ಬಜೆ ಡ್ಯಾಮ್ಗೆ ಹಾಗೂ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಈ ಬಗ್ಗೆ ಮಾಧ್ಯಮ ವರದಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನಮಗೆ ದೊರಕಿದ್ದು ಜನವರಿ 15ಕ್ಕೆ ಈ ಕಾಮಗಾರಿಯ ಅವಧಿ ಮುಗಿದಿರುವ ಬಗ್ಗೆ ಅವರ ಗಮನಕ್ಕೆ ಬರಲಿಲ್ಲವೇ? ಅಥವಾ ಈ ಹಗರಣದ ಬಗ್ಗೆ ಅವರು ಕಣ್ಣಿದ್ದು ಕುರುಡಾಗಿ ದ್ದರು? ಎಂದು ಪ್ರಶ್ನಿಸಿದರು.
ಈ ಬಗ್ಗೆ ಈಗಾಗಲೇ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ ಅವರು ರಾಜ್ಯ ಲೋಕಾಯುಕ್ತ ಜಸ್ಟೀಸ್ ವಿಶ್ವನಾಥ್ ಶೆಟ್ಟಿಯವರನ್ನು ಭೇಟಿ ನೀಡಿ ದೂರು ನೀಡಿದ್ದು ಹಗರಣದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಸೂಚನೆ ನೀಡಿರುತ್ತಾರೆ.
ಈ ನಡುವೆ ಹಗರಣದ ಬಗ್ಗೆ ನಾವು ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸಿದಾಗ ಅವರು ಅದು ಮಣ್ಣು ಮಿಶ್ರಿತ ಮರುಳೆಂದು ಸ್ಪಷ್ಟನೆಯನ್ನು ನೀಡಿರುವುದನ್ನು ನಾವು ಪತ್ರಿಕೆಯಲ್ಲಿ ಓದಿರುತ್ತೇವೆ. ಆದರೆ ಅವರಿಗೆ ಈ ಸಂದರ್ಭದಲ್ಲಿ ಈ ಕಾಮಗಾರಿ ಅವಧಿ ಮುಗಿದಿರುತ್ತದೆ ಅಥವಾ ಸಿಸಿ ಟಿವಿ, ಜಿಪಿಎಸ್ ಅಳವಡಿಸದಿರುವುದು ಗಮನಕ್ಕೆ ಬಂದಿಲ್ಲವೇ? ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಯಾಗುವವರೆಗೂ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಿರಂತರ ಹೋರಾಟ ನಡೆಯಲಿರುವುದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಿರುತ್ತೇವೆ ವಿಶ್ವಾಸ್ ವಿ. ಅಮೀನ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ವಿಜಯ ಪೂಜಾರಿ, ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಜಿಲ್ಲಾಧ್ಯಕ್ಷ ಯತೀಶ್ ಕರ್ಕೇರಾ, ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಂಜಯ್ ಆಚಾರ್ಯ ಉಪಸ್ಥಿತರಿದ್ದಾರೆ.