ಚಿಣ್ಣರ ಮಾಸೋತ್ಸವ ಕಾರ್ಯಕ್ರಮಕ್ಕೆ ಪಲಿಮಾರು ಸ್ವಾಮೀಜಿ ಚಾಲನೆ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ ನಡೆಯುವ ಚಿಣ್ಣರ ಸಂತರ್ಪಣೆಯ ಶಾಲೆಯ ವಿದ್ಯಾರ್ಥಿಗಳಿಂದ ಒಂದು ತಿಂಗಳ ಕಾಲ ನಡೆಯುವ ಚಿಣ್ಣರ ಮಾಸೋತ್ಸವ ಕಾರ್ಯಕ್ರಮವನ್ನು ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶನಿವಾರ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಸ್ವಾಮೀಜಿಗಳು ಗರ್ಭಗುಡಿಯೊಳಗೆ ಬಾಲಕೃಷ್ಣನ ಪ್ರತಿಮೆಯಲ್ಲಿ ದೇವರನ್ನು ಕಂಡರೆ ಹೊರಗಿನಿಂದ ಪುಟಾಣಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ದೇವರನ್ನು ಕಾಣಬಹುದು.ವಿಶೇಷವಾಗಿ ಮಕ್ಕಳಿಗೆ ಹಸಿವಿಗಾಗಿ ಪೌಷ್ಟಿಕ ಆಹಾರದ ವ್ಯವಸ್ಥೆ,ಪಠ್ಯದ ಬಗ್ಗೆ ಚಿಂತನೆ,ಪಠ್ಯೇತರ ವಿಷಯಗಳ ಆಸಕ್ತಿ ಈ ಮೂರೂ ವಿಷಯಗಳಿಗೆ ಸಹಕಾರ ನೀಡಬೇಕು.ಒಂದು ತಿಂಗಳುಗಳ ಕಾಲ ಇಲ್ಲಿ ನಡೆಯುವ ಯಕ್ಷಗಾನ ಮತ್ತು ಭಾರತೀಯ ಪರಂಪರೆಯ ಸಾಂಸ್ಕೃತಿಕ ಕಲೆಯಿಂದ ಮಕ್ಕಳ ಜ್ಞಾನ ವೃದ್ಧಿ ಆಗಲಿ ಎಂದು ಆಶೀರ್ವಚನ ನೀಡಿದರು.
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಪರ್ಯಾಯ ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು,ನಿರ್ಣಾಯಕರಾದ ನಾರಾಯಣ,ಅಜಿತ್ ಕುಮಾರ್ ಮತ್ತು ಚಿಣ್ಣರ ಸಂತರ್ಪಣೆಯ ಶಾಲಾ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಕುಮಾರ ಮಾಡ, ಕಾರ್ಯದರ್ಶಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ವೇದವ್ಯಾಸ ತಂತ್ರಿಗಳು ಸ್ವಾಗತಿಸಿ ಅಶೋಕ್ ಕುಮಾರ್ ಮಾಡ ಕಾರ್ಯಕ್ರಮ ನಿರ್ವಹಿಸಿ ನಿರ್ಮಲ್ ಕುಮಾರ ಧನ್ಯವಾದ ನೀಡಿದರು.