ಚಿತ್ರಗೀತೆಗಳು ಸಮಾಜದ ತಲ್ಲಣಗಳ ಪ್ರತೀಕ: ಪ್ರದೀಪ್ ಕುಮಾರ್ ಕಲ್ಕೂರಾ
ಮಂಗಳೂರು : ಹಳೆಯ ಸಿನಿಮಾಗಳ ಚಿತ್ರಗೀತೆಗಳು ನಮ್ಮ ಸಮಾಜದ ಸುತ್ತಮುತ್ತಲ ಘಟನೆಗಳು ಮತ್ತು ತಲ್ಲಣಗಳ ಪ್ರತೀಕವಾಗಿದ್ದು, ನಮ್ಮ ಮನವನ್ನು ಉತ್ತಮ ಚಿಂತನೆಗೆ ಪ್ರೇರೇಪಿಸುವಂತಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಹೇಳಿದ್ದಾರೆ.
ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ವತಿಯಿಂದ ಪುರಭವನದಲ್ಲಿ ನಡೆದ ಗಾನಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿನಿಮಾಗಳು ಹಾಗೂ ಸಿನಿಮಾ ಕಥಾ ವಸ್ತುಗಳು ಕೇವಲ ಮನರಂಜನೆಗೆ ಸೀಮಿತಾವಾದುದಲ್ಲ. ಅನೇಕ ಸಿನಿಮಾಗಳು ಜಗತ್ತಿನಲ್ಲಿ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗೂ ಕಾರಣವಾಗಿತ್ತು ಎಂದು ಅವರು ಹೇಳಿದರು. ಕನ್ನಡ ಸಿನಿಮಾದಲ್ಲಿ ಮೂಡಿಬಂದ ಹಲವಾರು ಚಿತ್ರಗೀತೆಗಳು 50-60 ವರ್ಷಗಳು ಕಳೆದಿದ್ದರೂ ಇಂದಿಗೂ ಜನರ ಬಾಯಲ್ಲಿ ಮೂಡಿಬರುತ್ತಿದೆ. ಹಲವು ಚಿತ್ರಗೀತೆ ಗಾಯಕರು ಅಚ್ಚಳಿಯದ ಇಂಪನ್ನು ಇಂದಿಗೂ ಬಿಂಬಿಸುತ್ತಿದ್ದಾರೆ ಎಂದು ಪ್ರದೀಪ್ ಕುಮಾರ್ ಕಲ್ಕೂರಾ ನುಡಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಗಾಯಕಿ ನಾಗಚಂದ್ರಿಕಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು.
ಗಾನಯಾನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಾನಚಂದ್ರಿಕಾ ಫೌಂಡೇಶನ್ ಕಲಾವಿದರು ವಿವಿಧ ಐತಿಹಾಸಿಕ ಹಾಗೂ ಹಳೆಯ ಕನ್ನಡ ಚಿತ್ರಗೀತೆಗಳನ್ನು ಹಾಡಿದರು.