Home Mangalorean News Kannada News ಚುನಾವಣಾ ರಾಜಕೀಯಕ್ಕೆ ಮಾಜಿ ಕೇಂದ್ರ ಸಚಿವ ಸದಾನಂದಗೌಡ ನಿವೃತ್ತಿ ಘೋಷಣೆ

ಚುನಾವಣಾ ರಾಜಕೀಯಕ್ಕೆ ಮಾಜಿ ಕೇಂದ್ರ ಸಚಿವ ಸದಾನಂದಗೌಡ ನಿವೃತ್ತಿ ಘೋಷಣೆ

Spread the love

ಚುನಾವಣಾ ರಾಜಕೀಯಕ್ಕೆ ಮಾಜಿ ಕೇಂದ್ರ ಸಚಿವ ಸದಾನಂದಗೌಡ ನಿವೃತ್ತಿ ಘೋಷಣೆ

ಹಾಸನ: ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿಯ ಹಿರಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ  ಅವರು ಚುನಾವಣಾ ರಾಜಕೀಯಕ್ಕೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

ಹಾಸನದಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬರ ಅಧ್ಯಯನದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ ಎಂದು ಹೇಳಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಸದಾನಂದಗೌಡ ಅವರು ಪ್ರಸ್ತುತ ಅವರು ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು  ಪ್ರತಿನಿಧಿಸುತ್ತಿದ್ದು, ‘ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷಗಳ ಕಾಲ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಏಳು ವರ್ಷ ಸಂಪುಟ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಹೆಚ್ಚು ಆಸೆಪಟ್ಟರೆ, ಜನ ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆ’ ಎಂದು ಹೇಳಿದರು.

2021ರಲ್ಲಿ ಕೇಂದ್ರ ಸಚಿವರ ಪುನಾರಚನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಅವರು ಕೇಂದ್ರ ಸಚಿವ ಸ್ಥಾನ ತ್ಯಜಿಸಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಇತ್ತೀಚೆಗೆ ವದಂತಿಗಳು ಹಬ್ಬಿದ್ದವು. ಆ ವಿಚಾರವಾಗಿ ಅಸಮಾಧಾನಗೊಂಡಿದ್ದ ಅವರು, ಪಕ್ಷದ ವರಿಷ್ಠರು ತಮ್ಮ ನಿಲುವು ತಿಳಿಸಬೇಕು ಎಂದು ಆಗ್ರಹಿಸಿದ್ದರು.

ಜೆಡಿಎಸ್​​ ಜತೆಗಿನ ಮೈತ್ರಿ ಎನ್​ಡಿಎ ನಿರ್ಧಾರ
ಎನ್‌ಡಿಎ ವಿಚಾರಕ್ಕೆ ಬಂದರೆ ನಮ್ಮ ಕೇಂದ್ರ ನಾಯಕರು ನಿರ್ಧಾರ ಕೈಗೊಂಡಿದ್ದಾರೆ. ಆದರೆ, ನಮ್ಮ ಕಾರ್ಯಕರ್ತರು ಇಷ್ಟು ವರ್ಷ ಹೋರಾಡಿದ ಪಕ್ಷದೊಂದಿಗೆ ಏಕಾಏಕಿ ಚುನಾವಣೆಗೆ ಸ್ಪರ್ಧಿಸುವುದು ಕಷ್ಟವಾಗುವುದರಿಂದ ರಾಜ್ಯದಲ್ಲಿ ಇದನ್ನು ಜಾರಿಗೆ ತರಲು ಸೂಕ್ತ ಮಾರ್ಗಸೂಚಿಗಳನ್ನು ನೀಡುವಂತೆ ನಾವು ಅವರಿಗೆ ಮನವಿ ಮಾಡಿದ್ದೇವೆ. ರಾಜ್ಯ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ತಮಗೆ ಮುಜುಗರ ಉಂಟು ಮಾಡಿದೆ. ವಿಳಂಬವನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದು ಮುಜುಗರವನ್ನು ಉಂಟುಮಾಡಿದೆ. ನಮ್ಮ ನಾಯಕರು ಈ ವಿಷಯದ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಮತ್ತು ಐದು ರಾಜ್ಯಗಳ ಚುನಾವಣೆಗಳು ಮುಗಿದ ನಂತರ ಘೋಷಣೆ ಮಾಡಬಹುದೆಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು.

ಹಾಸನದಲ್ಲಿ ಬೆಳೆ ನಷ್ಟ ಸಮೀಕ್ಷೆ
ಹಾಸನ ಜಿಲ್ಲೆಯಲ್ಲಿ ಬೆಳೆ ನಷ್ಟ ಸಮೀಕ್ಷೆ ನಡೆಸಿದ ಬಳಿಕ ಸದಾನಂದ ಗೌಡ, ಈ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಿಜೆಪಿಯ ವಿವಿಧ ತಂಡಗಳು ಸಮೀಕ್ಷೆ ನಡೆಸುತ್ತಿವೆ. ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತನಾಡಿದ ಗೌಡರು, ಕೇಂದ್ರ ನಾಯಕರು ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಈಗ ಮಳೆ ಬಂದರೆ ರೈತರಿಗೇನೂ ಪ್ರಯೋಜನವಿಲ್ಲ
ಹಾಸನ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ ಅವರು, ನಾವು ಬರ ಪ್ರವಾಸ ಬಂದಾಗ ಮಳೆ ಆರಂಭವಾಗಿದೆ. ಆದರೆ ಈಗ ಮಳೆ ಬಂದರೆ ರೈತರಿಗೆ ಏನೂ ಪ್ರಯೋಜನ ಆಗಲಾರದು ಎನ್ನೋದು ನನ್ನ‌ಭಾವನೆ. ಬಿಜೆಪಿ 14 ತಂಡಗಳಾಗಿ ರಾಜ್ಯದಲ್ಲಿ ವ್ಯಾಪಕ ಪ್ರವಾಸ ಮಾಡುತ್ತಿದೆ. ಈ ಮೂಲಕ ಕೇಂದ್ರ ರಾಜ್ಯ ಸರ್ಕಾರ ಎರಡೂ ಕೂಡ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡುತ್ತೇವೆ.

ನಮ್ಮ ಕೇಂದ್ರ ಸರ್ಕಾರದ ಮೇಲೆ ಕೂಡ ಒತ್ತಡ ಹಾಕುತ್ತೇವೆ. ಆದರೆ ಯಾರು ಸಮಸ್ಯೆ ಬಗ್ಗೆ ತಕ್ಷಣ ಸ್ಪಂಧಿಸುವ ಕೆಲಸ ಮಾಡಬೇಕಿತ್ತೋ ಅವರ ವೈಫಲ್ಯವನ್ನು ನಾವು ಜನರ ಮುಂದಿಡುತ್ತೇವೆ. ಆಗಸ್ಟ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಶೇಕಡಾ 73 ರಷ್ಟು ಮಳೆ ಕೊರತೆ ಆಗಿದೆ. ಇದು 125 ವರ್ಷಗಳಲ್ಲಿ ಯೇ ಅತ್ಯಂತ ಕಡಿಮೆ ಆಗಿದೆ ಎಂಬ ಮಾಹಿತಿ ಇದೆ. ರೈತರ ಪರಿಸ್ಥಿತಿ ಕಣ್ಣಲ್ಲಿ ನೀರು ತರಿಸುತ್ತಿದೆ, ರೈತರ ಹಾಳಾದ ಬೆಳೆ ಪ್ರದರ್ಶನ ಮಾಡಿ ಪರಿಸ್ಥಿತಿಯ ಕರಾಳತೆ ವಿವರಿಸಿದರು.

ರಾತ್ರಿ ವೇಳೆ ಒಂದು ಗಂಟೆಗೆ ಕರೆಂಟ್ ಕೊಡ್ತಾರೆ
ಮಳೆಯಿಲ್ಲದೆ ರೈತರಿಗೆ ದೊಡ್ಡ ಆಘಾತ ಆಗಿದೆ, ಮಳೆ ಬರದೆ ಹೀಗೆ ಆಗಿರೋದು ನಮ್ಮ ಕೈಲಿಲ್ಲ. ಆದರೆ ಅಲ್ಪ ಸ್ವಲ್ಪ ಬೆಳೆ ಉಳಿಸಲು ಪಂಪ್ ಸೆಟ್ ಬಳಸೋಣ ಎಂದರೆ ಕರೆಂಟ್ ಇಲ್ಲ. ರಾತ್ರಿ ವೇಳೆ ಒಂದು ಗಂಟೆಗೆ ಕರೆಂಟ್ ಕೊಡ್ತಾರೆ, ಆದರೆ ಕರೆಂಟ್ ಸಮಸ್ಯೆಯಿಂದ ಮನೆಯಿಂದ ಆಚೆ ಬರಲಾಗದೆ ಜನರು ಪರದಾಡುತ್ತಿದ್ದಾರೆ. ನಿನ್ನೆ ಸಿಎಂ ಹೇಳ್ತಾರೆ ರೈತರಿಗೆ ನಿತ್ಯ ಐದು ಗಂಟೆ ಕೊಡ್ತಿವಿ ಅಂತಾರೆ, ಆದರೆ ಅದು ಇನ್ನು ಜಾರಿ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.


Spread the love

Exit mobile version