ಚುನಾವಣೆಗಾಗಿ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ

Spread the love

ಚುನಾವಣೆಗಾಗಿ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ

ಬೆಂಗಳೂರು: ಐದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಕೈ, ತೆನೆ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಮಾಜಿ ಪ್ರಧಾನಿ‌ ಎಚ್.ಡಿ.ದೇವೇಗೌಡ, ಸಿಎಂ ಹೆಚ್‌ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೊದಲಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12 ವರ್ಷಗಳ ನಂತರ ನಾನು ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿದ್ದೇವೆ. ಮೂರು ಲೋಕಸಭೆ, ಎರಡು ಅಸೆಂಬ್ಲಿ ಉಪಚುನಾವಣೆಯಲ್ಲಿ ಮತ್ತೊಮ್ಮೆ ಜಾತ್ಯಾತೀತ ಶಕ್ತಿ ಗೆಲ್ಲಬೇಕಿದೆ. ಕೇಂದ್ರ ಸರಕಾರದಿಂದ ಗುಜರಾತ್, ಕಾಶ್ಮೀರ, ಯುಪಿ ಸೇರಿ ಇಡೀ ದೇಶದಲ್ಲಿ ನಾನಾ ಸಮಸ್ಯೆಗಳು ಹುಟ್ಟಿಕೊಂಡಿವೆ. ಅಲ್ಲದೆ, ಐದು ಕ್ಷೇತ್ರ ಗೆಲುವಿನ ಮೂಲಕ ಮುಂದಿನ ಲೋಕಸಭೆ ಚುನಾವಣೆ ಗೆಲುವಿಗೆ ಅಡಿಪಾಯ ಹಾಕಬೇಕಿದೆ. ಮುಂದಿನ ದೇಶದ ಬದಲಾವಣೆ ರಾಜ್ಯದಿಂದಲೇ ಆಗಬೇಕಿದೆ. ನಾವು ಒಂದಾಗಿದ್ದೇವೆ ಅನ್ನೋದಕ್ಕೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ನಂತರ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನ.3 ರಂದು ಉಪಚುನಾವಣೆ ನಡೆಯುತ್ತಿದ್ದು, ಜೆಡಿಎಸ್, ಕಾಂಗ್ರೆಸ್ ಒಟ್ಟಾಗಿ ಎದುರಿಸುತ್ತಿದ್ದೇವೆ. ಜತೆಗೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಒಂದಾಗಿದ್ದೇವೆ. ಈ ಹಿನ್ನೆಲೆ, ರಾಜ್ಯದಿಂದಲೇ ನಾವು ಪ್ರಾರಂಭ ಮಾಡುತ್ತಿದ್ದೇವೆ. ಬಿಜೆಪಿಗೆ ಯಾವುದೇ ಕಾರಣಕ್ಕೂ ಗೆಲ್ಲಲು ಅವಕಾಶ ನೀಡಬಾರದು. ಮಾಜಿ ಸಿಎಂ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವೈಯುಕ್ತಿಕವಾಗಿ ನನಗೆ ದ್ವೇಷವಿಲ್ಲ. ಸೈದ್ಧಾಂತಿಕ‌ ವಿಚಾರದಲ್ಲಿ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಜನಪರ ಕಾರ್ಯಕ್ರಮ ಘೋಷಿಸಿದೆ. ಆದರೆ ಇದುವರೆಗೆ ಯಾವುದು ಅನುಷ್ಠಾನವಾಗಿಲ್ಲ. ಕೊಡಗಿನಲ್ಲಿ ನಷ್ಟವಾದರೂ ನೆನಪಿಸಿಕೊಳ್ಳಲಿಲ್ಲ. ಸದ್ಯ, ದೇಶದ ಚಿತ್ರಣವೇ ಬದಲಾಗಿದ್ದು, ಐದೂ ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ಮುಂದೆ 28 ಲೋಕಸಭಾ ಕ್ಷೇತ್ರಗಳಲ್ಲಿ ಸಹ ಗೆಲುವು ಸಾಧಿಸುವ ಮೂಲಕ ದೇಶದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ತರುತ್ತೇವೆ ಎಂದರು.


Spread the love