Home Mangalorean News Kannada News ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ

ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ

Spread the love

ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ

ಮಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವ್ಯವಹಾರಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕುಗಳು ತಮ್ಮ ಶಾಖೆಗಳಲ್ಲಿ ನಡೆಯುವ ದೊಡ್ಡ ಮೊತ್ತದ ವ್ಯವಹಾರದ ಸಮಗ್ರ ವಿವರ ಪ್ರತೀನಿತ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವನ್ನು ಸಹಿಸಲಾಗದು. ಯಾವುದೇ ಬ್ಯಾಂಕ್ ಮಾಹಿತಿ ನೀಡದಿದ್ದರೆ, ಅಂತಹ ಬ್ಯಾಂಕುಗಳಿಗೆ ಬೀಗ ಹಾಕಲೂ ಹಿಂಜರಿಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು. ಪ್ರಜಾಪ್ರಾತಿನಿಧ್ಯ ಕಾಯಿದೆ ಇತರೆ ಎಲ್ಲಾ ಕಾಯಿದೆಗಳಿಗಿಂತಲೂ ಮಿಗಿಲಾಗಿದೆ ಎಂದರು.

ಸಹಕಾರ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವ್ಯವಹಾರವನ್ನೂ ಪರಿಶೀಲಿಸಬೇಕು. ಇದಲ್ಲದೇ ಹವಾಲ ಮೂಲಕ ನಡೆಯುತ್ತಿರುವ ಹಣದ ಚಲಾವಣೆಯ ಮೇಲೆ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸರಕು ಸಾಗಣೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಯು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ಆರ್ಥಿಕ ವಹಿವಾಟು ಹಾಗೂ ನಗದು ಚಲಾವಣೆಯ ಮೇಲೆ ಗಮನಿಸಲು ಆದಾಯ ತೆರಿಗೆ, ಕಸ್ಟಮ್ಸ್, ಬ್ಯಾಂಕುಗಳು ಮತ್ತು ಪೊಲೀಸ್ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಗೆ ಆಗಮಿಸಲಿರುವ ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕರಾದ ಎಸ್. ಅನಿಲ್ ಕುಮಾರ್, ವಿನೋದ್ ಶರ್ಮಾ, ಶ್ಯಾಂ ಮನೋಹರ್ ಸಿಂಗ್, ಅಮಿತ್ ಕುಮಾರ್ ಸಿಂಘಾಲ್ ಅವರು ಇದುವರೆಗಿನ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ವೈಶಾಲಿ ಮತ್ತಿತರರು ಇದ್ದರು.


Spread the love

Exit mobile version