ಚೂರಿ ಇರಿತ ಕೃತ್ಯಕ್ಕೆ ಪ್ರಚೋದನಕಾರಿ ಘೋಷಣೆ ಕಾರಣ: ಅನುಪಮ್ ಅಗರ್ವಾಲ್
ಮಂಗಳೂರು: ಬಿಜೆಪಿ ವಿಜಯೋತ್ಸವದ ಮೆರವಣಿಗೆ ವೇಳೆ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೆರವಣಿಗೆ ನಡೆಸಿದವರು ಪ್ರಚೋದನಾಕಾರಿ ಘೋಷಣೆ ಮಾಡಿರುವುದು ಮುಖ್ಯ ಕಾರಣವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಮಾತಾಕಿ ಜೈ ಎಂಬ ಘೋಷಣೆಯಿಂದ ಪ್ರಚೋದನೆಗೊಂಡಿಲ್ಲ. ಬದಲಾಗಿ ಇದಕ್ಕೂ ಮೊದಲು ಮೆರವಣಿಗೆಯಲ್ಲಿ ಆಟೋ ನಿಲ್ದಾಣದ ಸಮೀಪ ಪಾಕಿಸ್ತಾನವನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಘೋಷಣೆಯನ್ನು ಕೂಗಿದ್ದಾರೆ ಇದು ಸೋಶಿಯಲ್ ಮೀಡಿಯಾದ ಮೂಲ ಸಮುದಾಯದವರಿಗೆ ತಲುಪಿದೆ. ಇದರಿಂದ ಕೆಲವರು ಈ ಕೃತ್ಯ ನಡೆಸಿದ್ದಾರೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.
ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿ ವೀಡಿಯೋ ಆಧಾರದಲ್ಲಿ 20 ಜನರನ್ನು ವಶಕ್ಕೆ ಪಡೆದಿದ್ದೆವು. ಆರು ಮಂದಿಯ ಬಂಧನವಾಗಿದ್ದು, ಪ್ರಮುಖ ಆರೋಪಿ ರೌಡಿಶೀಟರ್ ತಲೆಮರೆಸಿಕೊಂಡಿದ್ದಾನೆ. ಆತ ಚೂರಿ ಇಟ್ಟುಕೊಂಡಿದ್ದ. ಮೂರು ತಂಡದಿಂದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಈಗಾಗಲೇ ಕೋಣಾಜೆ ಠಾಣೆಯಲ್ಲಿ ನನ್ನ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಿದ್ದೇವೆ. ಎಲ್ಲ ಧರ್ಮದ ಪ್ರಮುಖರನ್ನು ಸಭೆಗೆ ಕರೆಯಲಾಗುವುದು. ಇದರ ಜತೆಗೆ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿದ್ದೇವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಆಯಂಟಿ ಕಮ್ಯುನಲ್ ವಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಚುನಾವಣೆಯ ಸಂದರ್ಭದಲ್ಲಿ ಈ ದಳ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ನಿಗಾ ಇರಿಸಿ ಸುಮಾರು 300ಕ್ಕೂ ಅಧಿಕ ಮಂದಿಯನ್ನು ಗುರುತಿಸಿ 75 ಮಂದಿಯನ್ನು ಗಡೀಪಾರು ಮಾಡಲಾಗಿದ್ದು, 8 ಜನರ ಮೇಲೆ ಗೂಂಡಾ ಕಾಯ್ದೆ ಹೇರಲಾಗಿತ್ತು ಎಂದರು.
ಬೋಳಿಯಾರ್ನಲ್ಲಿ ನಡೆದ ಚೂರಿ ಇರಿತ ಘಟನೆಯ ಹಿನ್ನೆಲೆಯಲ್ಲಿ ಗಸ್ತು ಕಾರ್ಯ ಬಿಗಿಗೊಳಿಸಲಾಗಿದೆ. ವಾಹನಗಳಲ್ಲಿ ಸಂಚರಿಸುವವರನ್ನು ಪಾಕೆಟ್ ಚೂರಿ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.