ಚೆಕ್ ಬೌನ್ಸ್ ಪ್ರಕರಣ: ಭೀಮ ಲಕ್ಷ್ಮೀ ಚಿಟ್ಸ್ ಗೆ ಎರಡು ಪ್ರಕರಣಗಳಲ್ಲೂ ಸೋಲು- ಆರೋಪಿಗಳಿಬ್ಬರ ಖುಲಾಸೆ
ಮಂಗಳೂರು: ಭೀಮ ಲಕ್ಷ್ಮೀ ಚಿಟ್ಸ್ ಪ್ರೈ.ಲಿ. ದಾಖಲಿಸಿದ ಎರಡು ಚೆಕ್ ಬೌನ್ಸ್ ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಿಬ್ಬರನ್ನೂ ಖುಲಾಸೆಗೊಳಿಸಿ ಮಂಗಳೂರಿನ ನಾಲ್ಕನೇ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ(ಜೆಎಂಎಫ್.ಸಿ) ನ್ಯಾಯಾಲಯ ತೀರ್ಪು ನೀಡಿದೆ.
2019ರಲ್ಲಿ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಭೀಮ ಲಕ್ಷ್ಮಿ ಚಿಟ್ಸ್ ಸಂಸ್ಥೆ ಮಂಗಳೂರಿನ ಜೆಎಂಎಫ್.ಸಿ ನ್ಯಾಯಾಲಯದಲ್ಲಿ ಆರೋಪಿಗಳಾದ ಇಳಂಗೋವನ್ ಮತ್ತಿವಣ್ಣನ್ ಮತ್ತು ರಾಜೇಶ್ವರಿ ಇಳಂಗೋವನ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಚಿಟ್ಸ್ ಸಂಸ್ಥೆಯಲ್ಲಿ ಪಡೆದ ಸಾಲಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ನೀಡಲಾಗಿದ್ದ ಚೆಕ್ ಅಮಾನ್ಯಗೊಂಡಿರುವುದಾಗಿ ವಾದಿಸಿದ್ದ ಫಿರ್ಯಾದಿ ಸಂಸ್ಥೆ, ತನ್ನ ದೂರನ್ನು ಸಮರ್ಥಿಸಲು ಎರಡು ಪ್ರಕರಣಗಳಲ್ಲೂ 14 ದಾಖಲೆಗಳನ್ನು ಹಾಜರುಪಡಿಸಿತ್ತು.
ಫಿರ್ಯಾದಿ ಪರ ಭೀಮ ಲಕ್ಷ್ಮೀ ಚಿಟ್ಸ್ ಮಾಲಕ ಮತ್ತು ಅಧಿಕಾರ ಪತ್ರ ಹೊಂದಿದ ಜೀತೇಂದ್ರ ಶೆಟ್ಟಿ, ತಲಪಾಡಿ ಅವರು ನ್ಯಾಯಾಲಯಕ್ಕೆ ಹಾಜರಾಗಿ ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಸಾಕ್ಷಿ ನುಡಿದಿದ್ದರು. ಆರೋಪಿ ಪರ ಯಾವುದೇ ದಾಖಲೆಯನ್ನು ಹಾಜರುಪಡಿಸಿರಲಿಲ್ಲ. ಅಭಿರಕ್ಷೆ ಪರ ಸಾಕ್ಷಿ ನುಡಿದಿದ್ದ ಆರೋಪಿಗಳಾದ ಇಳಂಗೋವನ್ ಮತ್ತಿವಣ್ಣನ್ ಮತ್ತು ರಾಜೇಶ್ವರಿ ಇಳಂಗೋವನ್, ಭದ್ರತೆಗಾಗಿ ನೀಡಲಾಗಿದ್ದ ಚೆಕ್ಕನ್ನು ಭೀಮ ಲಕ್ಷ್ಮೀ ಚಿಟ್ಸ್ ಸಂಸ್ಥೆ ದುರುಪಯೋಗ ಮಾಡಿಕೊಂಡಿದೆ ಎಂದು ಸಾಕ್ಷಿ ನುಡಿದಿದ್ದರು.
ಎರಡೂ ಪಕ್ಷಕಾರರ ಸಾಕ್ಷಿಗಳು ಮತ್ತು ಮಂಡಿಸಿದ ವಾದವನ್ನು ಆಲಿಸಿದ ಮಾನ್ಯ ನ್ಯಾಯಾಧೀಶರಾದ ಪಾರ್ವತಿ ಸಿ.ಎಂ. ಅವರಿದ್ದ ನಾಲ್ಕನೇ ಜೆಎಂಎಫ್.ಸಿ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಎರಡೂ ಪ್ರಕರಣಗಳಲ್ಲಿ ಆರೋಪಿ ಪರ ಮಂಗಳೂರಿನ ವಕೀಲರಾದ ಶ್ರೀಪತಿ ಪ್ರಭು ಕೆ. ಅವರು ವಾದ ಮಂಡಿಸಿದ್ದರು.