Home Mangalorean News Kannada News ಚೆಸ್ ಕ್ರೀಡೆಗೆ ಉತ್ತೇಜನ ನೀಡಿದ ರಾಜ್ಯಮಟ್ಟದ ಚೆಸ್ ಸ್ಫರ್ಧೆ

ಚೆಸ್ ಕ್ರೀಡೆಗೆ ಉತ್ತೇಜನ ನೀಡಿದ ರಾಜ್ಯಮಟ್ಟದ ಚೆಸ್ ಸ್ಫರ್ಧೆ

Spread the love

ಚೆಸ್ ಕ್ರೀಡೆಗೆ ಉತ್ತೇಜನ ನೀಡಿದ ರಾಜ್ಯಮಟ್ಟದ ಚೆಸ್ ಸ್ಫರ್ಧೆ

ಮ0ಗಳೂರು : ಮಂಗಳೂರಿನ ಸಂತ ಆಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯು ಜಿಲ್ಲೆಯಲ್ಲಿ ಚೆಸ್ ಕ್ರೀಡೆಗೆ ಉತ್ತೇಜನ ದೊರೆತಂತಾಗಿದೆ.

ಈ ಕ್ರೀಡೆಯಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಆಟಗಾರರು ಪಂದ್ಯಾಟದಲ್ಲಿ ಭಾಗಿಯಾಗಿರುವುದು ಆಟದ ಆಕರ್ಷಣೆ ಹಾಗೂ ಕುತೂಹಲವನ್ನು ಹೆಚ್ಚಿಸಿದೆ. ಸ್ಪರ್ಧೆಯೂ ತೀವ್ರ ಪೈಪೋಟಿಯಿಂದ ನಡೆದು, ಜಿಲ್ಲೆಯೆಲ್ಲೆಡೆ ವ್ಯಾಪಕವಾದ ಪ್ರಶಂಸೆಗಳು ವ್ಯಕ್ತವಾಗಿದೆ. ಟೂರ್ನಿಯಲ್ಲಿ ಸುಮಾರು 31 ಶೈಕ್ಷಣಿಕ ಜಿಲ್ಲೆಯ 590 ಕ್ರೀಡಾಪಟುಗಳು, 123 ತಂಡದ ವ್ಯವಸ್ಥಾಪಕರು ಹಾಗೂ ಕ್ರೀಡಾಳುಗಳ ಹೆತ್ತವರು ಕೂಡ ಭಾಗಿಯಾಗಿದ್ದರು.

ಕ್ರೀಡಾಕೂಟದಲ್ಲಿ ಪಾಯಿಂಟಗಳ ಆಧಾರದ ಮೇಲೆ 4 ವಿಭಾಗಗಳಲ್ಲಿ 20 ಮಂದಿಯನ್ನು ಅಂತಿಮವಾಗಿ ಆರಿಸಲಾಗುತ್ತದೆ. ಆಯ್ಕೆಯಾದವರು ನವೆಂಬರ್‍ನಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿರುವರು. ಪ್ರತಿ ಆಟದಲ್ಲಿ ಗೆಲುವು ಸಾಧಿಸುವ ಕ್ರೀಡಾಪಟುವಿಗೆ 1 ಪಾಯಿಂಟ್ ಸಿಗುತ್ತದೆ. ಸೋಲು ಅನುಭವಿಸಿದ ಸ್ಪರ್ಧಿಗೆ ಶೂನ್ಯ ಪಾಯಿಂಟ್ ನೀಡಲಾಗುತ್ತದೆ. ಇವೆಲ್ಲವೂ ಸ್ಕ್ರೀನ್ ಮೇಲೆ ಮೂಡಿಬರುವಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಈ ಪಂದ್ಯಾಟವು ವ್ಯವಸ್ಥಿತವಾಧ ರೀತಿಯಲ್ಲಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಸ್ಪರ್ಧಿಗಳಿಗೆ ಕೆನರಾ ಹೈಸ್ಕೂಲ್ , ಬೆಸೆಂಟ್ ಸ್ಕೂಲ್, ಸಂತ ಆಲೋಶಿಯಸ್ ಹೈಸ್ಕೂಲ್, ತಾಂತ್ರಿಕ ತರಭೇತಿ ಸಂಸ್ಥೆ, ಹಾಗೂ ಬಿ.ಎ.ಡ್. ಕಾಲೇಜುಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಊಟ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದ ಶಿಕ್ಷಣ ಇಲಾಖೆ ಮತ್ತು ಸಂತ ಆಲೋಶಿಯಸ್ ಕಾಲೇಜಿನ ಕಾರ್ಯವೈಖರಿ ಕುರಿತು ಪಾಲಕರು,ತಂಡದ ವ್ಯವಸ್ಥಾಪಕರು ಹಾಗೂ ಕ್ರೀಡಾಳುಗಳು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ..

ಚೆಸ್ ಆಟವು ಮಾನಸಿಕ ತಯಾರಿಯನ್ನು ನಡೆಸಿ ಆಡುವ ಆಟವಾಗಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗೆ ಆಡಿ ಒತ್ತಡದಲ್ಲಿದ್ದ ಕ್ರೀಡಾಳುಗಳಿಗೆ ಮನರಂಜನೆಯನ್ನು ನೀಡಲು ಬುಧವಾರ ಸಂಜೆ ವಿವಿಧ ಸ್ಥಳೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು. ಜಿಲ್ಲೆಯ ಅನೇಕ ಕ್ರೀಡಾಪಟುಗಳು ಇಲ್ಲಿ ಸ್ಫರ್ಧಿಸುತ್ತಿದ್ದು, ಅದರಲ್ಲಿ ಗ್ರಾಮೀಣ ಪ್ರದೇಶದಿಂದ ಬಂದಿರುವಂತಹ ಪ್ರತಿಭೆಗಳು ಕೂಡ ಇದ್ದಾರೆ. ತಮ್ಮ ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆಯಿದ್ದರೂ ಇತರ ಶಿಕ್ಷಕರ ಸಹಾಯ ಪಡೆದು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡುತ್ತಿರುವುದು ಗಮನಾರ್ಹವಾಗಿದೆ.

ಪಂದ್ಯಾಟವನ್ನು ಆಯೋಜಿಸಿದ್ದ ಸಂತ ಆಲೋಶಿಯಸ್ ಹಿ.ಪ್ರಾ..ಶಾಲೆ ಸಂಚಾಲಕ ಎರಿಕ್ ಮಥಾಯಸ್ “ಕಳೆದ ಮೂರು ತಿಂಗಳಿನಿಂದ ಪಟ್ಟಿರುವ ಕಷ್ಟಕ್ಕೆ ಫಲ ಸಿಕ್ಕಿದೆ. ನಮ್ಮ ಸಂಸ್ಥೆಯ ಟೀಮ್ ವರ್ಕ್‍ನಿಂದ ಯಶಸ್ವಿ ಪಂದ್ಯಾಟದ ಆಯೋಜನೆಯಾಗಿದೆ. ಜಿಲ್ಲೆಯ ಎಲ್ಲರೂ ನಮಗೆ ಸಹಕಾರ ಕೊಟ್ಟಿದ್ದಾರೆ, ಅವಕಾಶ ಸಿಕ್ಕರೆ ಮುಂದಿನ ವರ್ಷವೂ ಪಂದ್ಯಾಟ ಆಯೋಜಿಸುವ ಯೋಜನೆ ಇದೆ” ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಚೆಸ್ ಕ್ರೀಡೆಯ ಅಂತಾರಾಷ್ಟ್ರೀಯ ತೀರ್ಪುಗಾರ ಮಂಜುನಾಥ ಮೂರ್ತಿ “ ರಾಷ್ಟ್ರ ಮಟ್ಟದಲ್ಲಿಯೂ ಸಿಗದಿರುವಂತಹ ಅದ್ಭುತವಾದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಯಾವುದೇ ಕೊರತೆಗಳನ್ನು ಕಾಣದೇ ಟೂರ್ನಿಯೂ ಯಶಸ್ವಿಯಾಗಿ ನಡೆಯುತ್ತಿದೆ.ಡಿಸ್ ಪ್ಲೇ ಸ್ಕ್ರೀನ್ ಅನ್ನು ಅಳವಡಿಸಿರುವುದರಿಂದ ಹೆತ್ತವರ ಹಾಗೂ ತರಭೇತುದಾರರ ಆತಂಕ ದೂರವಾಗಿದೆ” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಳೆದ ಬಾರಿ ರಾಷ್ಟ್ರಮಟ್ಟದ ಚೆಸ್ ಕ್ರೀಡೆಯಲ್ಲಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದೀಪ್ತಿ ಲಕ್ಷ್ಮೀ ಕೆ. “ ಸ್ಪರ್ಧೆ ತುಂಬಾ ಕಷ್ಟಕರವಾಗಿದೆ. ಕಳೆದ ಬಾರಿ ರಾಷ್ಟ್ರವನ್ನು ಪ್ರತಿನಿಧಿಸಿದ್ದೆ ಈ ಬಾರಿಯೂ ಸತತ ಪ್ರಯತ್ನ ಮತ್ತು ಅಭ್ಯಾಸ ಮಾಡಿರುತ್ತೇನೆ” ಎಂದು ಹೆಮ್ಮೆಯಿಂದ ನುಡಿದರು.


Spread the love

Exit mobile version