ಚೊಂಬಿನ ಬಗ್ಗೆ ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ: ಐವನ್ ಡಿಸೋಜ

Spread the love

ಚೊಂಬಿನ ಬಗ್ಗೆ ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ: ಐವನ್ ಡಿಸೋಜ
 

ಮಂಗಳೂರು: ರಾಜ್ಯದ ಜನತೆಗೆ ಬಿಜೆಪಿ ನೀಡಿದ್ದು ಕೇವಲ ‘ಚೊಂಬು’ ಮಾತ್ರವಾಗಿದೆ. ಬಿಜೆಪಿಗರು ನೀಡಿರುವ ಆ ‘ಖಾಲಿ ಚೊಂಬು’ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಶಾಸಕ ಐವನ್ ಡಿಸೋಜ ಸವಾಲು ಹಾಕಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಚೊಂಬಿನಲ್ಲಿ ಹಾಕ ಬೇಕಾದ್ದನ್ನು ಹಾಕದೆ ರಾಜ್ಯಕ್ಕೆ ಬರೀ ಚೊಂಬು ನೀಡಿದ್ದಾರೆ. ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕಿಲ್ಲ, ರೈತರ ಆದಾಯ ಡಬಲ್ ಮಾಡಿಸಿಲ್ಲ. ನೆರೆ- ಬರ ಪರಿಹಾರ ಅನುದಾನ ನೀಡಿಲ್ಲ. ಹಾಗಾಗಿ ಬಿಜೆಪಿ ಜನರಿಗೆ ಖಾಲಿ ಚೊಂಬು ನೀಡಿದೆ ಅಂತ ಹೇಳಿದರೆ ವಿಪಕ್ಷ ನಾಯಕ ಆರ್. ಅಶೋಕ್ ಅದರ ಬಗ್ಗೆ ಚರ್ಚೆಗೆ ಸಿದ್ಧರಿಲ್ಲ. ಬದಲಾಗಿ ನೀವು ರಾಮ ಮಂದಿರ ವಿರೋಧಿಗಳು ಅಂತ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ಯುವತಿ ಕೊಲೆಯನ್ನು ಯಾರೂ ಬೆಂಬಲಿಸಬಾರದು. ಸಂಸದೆ ಶೋಭಾ ಕರಂದ್ಲಾಜೆ ಬೇರೆ ವಿಚಾರದಲ್ಲಿ ಮಾತಾಡಲ್ಲ. ಈಗ ಕೊಲೆಯಲ್ಲಿ ಕಾಂಗ್ರೆಸ್ ಕೈವಾಡ ಅಂತಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯನ್ನು ಕೂಡಲೆ ಬಂಧಿಸಲಾ ಗಿದೆ. ಆದರೂ ಬಿಜೆಪಿಗರು ಕೊಲೆ ವಿಚಾರದಲ್ಲಿ ರಾಜಕೀಯ ಮಾಡುತ್ತಾರೆ ಎಂದು ಐವನ್ ಡಿಸೋಜ ಹೇಳಿದರು.

ರಾಜ್ಯದ ಬಗ್ಗೆ ಸಂಸತ್ತಲ್ಲಿ ಒಂದು ಶಬ್ದ ಮಾತನಾಡದ ಬಿಜೆಪಿ ಸಹೊತ 27 ಎಂಪಿಗಳು ರಾಜ್ಯಕ್ಕೆ ಎನ್‌ಪಿಎಗಳು (ಅನುತ್ಪಾದಕ ಆಸ್ತಿ). ಕೆಲವು ಎಂಪಿಗಳು ಸಂಸತ್ತಲ್ಲಿ ಒಂದೇ ಒಂದು ಪ್ರಶ್ನೆ ಹಾಕಿಲ್ಲ, ಕೆಲವರು ಸಂಸತ್ತಿನ ಮುಖವನ್ನೇ ನೋಡಿಲ್ಲ. ಇದು ಚರ್ಚೆಯ ವಿಷಯ ಆಗಬೇಕು. ಇಂತಹ ಎಂಪಿಗಳಿಗೆ ಗೇಟ್‌ಪಾಸ್ ನೀಡಬೇಕು ಎಂದು ಐವನ್ ಡಿಸೋಜ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಶ್ರಫ್, ಅಪ್ಪಿ, ಪ್ರಕಾಶ್ ಸಾಲ್ಯಾನ್, ಶಾಹುಲ್ ಹಮೀದ್, ಶುಭೋದಯ ಆಳ್ವ, ಎಂ.ಪಿ. ಮನುರಾಜ್, ಪದ್ಮಪ್ರಸಾದ್ ಉಪಸ್ಥಿತರಿದ್ದರು.


Spread the love