ಚೊಕ್ಕಬೆಟ್ಟು ಮರಿಯಪ್ಪ ಕೊಲೆ ಪ್ರಕರಣ – ಇಬ್ಬರ ಬಂಧನ
ಮಂಗಳೂರು: ಚೊಕ್ಕಬೆಟ್ಟು ಸೇತುವೆ ಅಡಿಯಲ್ಲಿ ಪತ್ತೆಯಾದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮರಿಯಪ್ಪ ಅವರನ್ನು ಕೊಲೆ ಮಾಡಿ ಕತ್ತರಿಸಿ ಚೀಲದಲ್ಲಿ ಹಾಕಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಸುರತ್ಕಲ್ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಾಗಲಕೋಟೆ ಜಿಲ್ಲೆ ಹುನುಗುಂದ ನಿವಾಸಿ ಗೌಡಪ್ಪ ಗೌಡ ಸಣ್ಣಗೌಡ್ರ (55) ಮತ್ತು ಕುಷ್ಟಗಿ ನಿವಾಸಿ ಹುಲ್ಲಪ್ಪ ಬಸಪ್ಪ ಸೂಡಿ (28) ಎಂದು ಗುರುತಿಸಲಾಗಿದೆ.
ಜೂನ್ 2ರಂದು ಚೊಕ್ಕಬೆಟ್ಟು ಬ್ರಿಡ್ಜ್ ನ ಅಡಿಭಾಗದ ತೋಡಿನಲ್ಲಿ ಕಸಗಳ ಎಡೆಯಲ್ಲಿ ಸುಮಾರು 45-50 ವರ್ಷ ಪ್ರಾಯದ ಮರಿಯಪ್ಪ ಅವರ ಸೊಂಟದಿಂದ ಮೇಲ್ಬಾಗದ ಮೃತ ದೇಹವು ಕಂಡು ಬಂದಿದ್ದು, ಮೃತ ದೇಹವನ್ನು ಪರಿಶೀಲಿಸಿದಲ್ಲಿ ಸೊಂಟದಿಂದ ಕೆಳಬಾಗ ಕತ್ತರಿಸಿದಂತೆ ಕಂಡು ಬಂದಿದ್ದು, ಕುತ್ತಿಗೆ ಭಾಗದಲ್ಲಿ ಕತ್ತರಿಸಿದಂತೆ ಕಂಡು ಬಂದಿರುತ್ತದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವು ದಾಖಲಾಗಿರುತ್ತದೆ. ಅದೇ ದಿನ ಮಧ್ಯಾಹ್ನ 2-45 ಗಂಟೆಗೆ ಮೃತ ದೇಹದ ಉಳಿದ ಸೊಂಟದಿಂದ ಕೆಳಗಿನ ಭಾಗವು ತೋಡಿನಲ್ಲಿ ಪತ್ತೆಯಾಗಿರುತ್ತದೆ.
ಈ ಕುರಿತಂತೆ ಮೃತನ ಸಂಬಂಧಿಕರನ್ನು ಪತ್ತೆ ಮಾಡಿ, ಅವರನ್ನು ವಿಚಾರಿಸಿದಲ್ಲಿ, ಮೃತ ಮರಿಯಪ್ಪ ರವರು ಗೌಡಪ್ಪ ಮತ್ತು ಸಣ್ಣಗೌಡ್ರು ಎಂಬವರ ಜೊತೆ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಜೂನ್ 4ರಂದು ಆರೋಪಿಗಳನ್ನು ಮಂಗಳೂರು ಚೊಕ್ಕಬೆಟ್ಟು ಕಾನದ ಲಾರ್ಡ್ ಕೃಷ್ಣ ಎಸ್ಟೇಟ್ ಇಲಿಯಾಸ್ ಕ್ರಾಸ್ತ ರವರ ತೋಟದ ಮನೆಯ ಹತ್ತಿರ ವಶಕ್ಕೆ ಪಡೆದುಕೊಳ್ಳಲಾಯಿತು.
ಮೃತರು ಮತ್ತು ಆರೋಪಿಗಳಿಬ್ಬರು ಒಂದೇ ಕೊಠಡಿಯಲ್ಲಿ ವಾಸವಿದ್ದು, ಆರೋಪಿ ಗೌಡಪ್ಪ ಗೌಡ ನು ಮೃತ ಮರಿಯಪ್ಪ ರವರಿಗೆ ಹಣವನ್ನು ನೀಡಬೇಕಾಗಿದ್ದು, ಈ ವಿಷಯದ ಕುರಿತು ಆರೋಪಿಗಳಿಬ್ಬರು ಸೇರಿ ಮರಿಯಪ್ಪರವರನ್ನು ಕೊಲೆ ಮಾಡಿರುವುದಾಗಿದೆ. ಪ್ರಸ್ತುತ ಆರೋಪಿಗಳಿಬ್ಬರು ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಈ ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಪ್ರಭಾರ ಸಹಾಯಕ ಪೊಲೀಸ್ ಆಯುಕ್ತರ ಗೋಪಾಲಕೃಷ್ಣ ನಾಯಕ್ ರವರ ಮಾರ್ಗದರ್ಶನದಲ್ಲಿ ಕೆ.ಜಿ ರಾಮಕೃಷ್ಣ, ಪಿ.ಐ ಪೊಲೀಸ್ ನಿರೀಕ್ಷಕರು, ಸುರತ್ಕಲ್ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸಹಾಯಕ ಪೊಲೀಸ್ ಆಯುಕ್ತರ ಕಛೇರಿ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.