‘ಚೌಕಿದಾರ್ ಶೇರ್ ಹೇ’ ಸ್ಟಿಕ್ಕರ್ ತೆಗೆಯಲು ಹೋದ ಚುನಾವಣಾಧಿಕಾರಿಗಳಿಗೆ ಅಡ್ಡಿ ; ಕಾರು ವಶ
ಕಾರ್ಕಳ: ಕಾರಿಗೆ ನಿಯಮ ಬಾಹಿರವಾಗಿ ‘ಚೌಕಿದಾರ್ ಶೇರ್ ಹೇ’ ಎಂಬ ಸ್ಟಿಕ್ಕರ್ ಅಂಟಿಸಿ, ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ, ಕಾರನ್ನು ಕಾರ್ಕಳದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಕಾರ್ಕಳ ಅನಂತಶಯನದಲ್ಲಿ ಶುಕ್ರವಾರ ಬೆಳಿಗ್ಗೆ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ, ಬಂದ ಕಾರಿನ ಹಿಂಭಾಗ ಪೂರ್ತಿ ‘ ಚೌಕಿದಾರ್ ಶೇರ್ ಹೇ’ ಎಂಬ ಸ್ಟಿಕ್ಕರ್ ಅಂಟಿಸಿದ್ದು, ಇದನ್ನು ತೆಗೆಯುವಂತೆ ಅಧಿಕಾರಿಗಳು ಕಾರಿನ ಚಾಲಕ ವಿಪುಲ್ ತೇಜ್ ಎಂಬಾತನಿಗೆ ಸೂಚಿಸಿದ್ದರು. ಆದರೆ, ಚಾಲಕ ವಿಪುಲ್ ತೇಜ್ ಇದಕ್ಕೆ ನಿರಾಕರಿಸಿದ್ದಲ್ಲದೇ, ಅಧಿಕಾರಿಗಳನ್ನೇ ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾನೆ. ಎಷ್ಟೇ ಸೂಚನೆ ನೀಡಿದರೂ, ಆರೋಪಿ ಸ್ಟಿಕ್ಕರ್ ತೆಗೆಯಲು ನಿರಾಕರಿಸಿದ್ದರಿಂದ ಅಧಿಕಾರಿಗಳು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ನೋಡಲ್ ಅಧಿಕಾರಿ ಹರ್ಷ ಕೆ.ಬಿ. ನೀಡಿದ ದೂರಿನಂತೆ ವಿಪುಲ್ ತೇಜ್ ವಿರುದ್ಧ ಅನುಮತಿ ಇಲ್ಲದ ಸ್ಟಿಕ್ಕರ್ ಅಂಟಿಸಿ, ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.