ಛಲವಾದಿಯವರು ತಮ್ಮ ಕೆಟ್ಟ ಮನಸ್ಥಿತಿಗೆ ಸಿದ್ದರಾಮಯ್ಯರವರಲ್ಲಿ ಕ್ಷಮೆ ಯಾಚಿಸಲಿ – ರಮೇಶ್ ಕಾಂಚನ್
ಉಡುಪಿ: ನಮ್ಮ ಜನರಿಗೆ ಅನ್ಯಾಯ ಮಾಡಿರೋದಕ್ಕೆ, ನೀವು ಕುಂಟುತಿರೋದು, ಇದೀಗ ವ್ಹೀಲ್ ಚೇರ್ ಬಂದಿದೆ. ಮುಂದೆ ಬೇರೆ ಚೇರ್ ಬರುತ್ತೆ ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ನಾಲಿಗೆ ಹರಿಬಿಟ್ಟಿರುವುದು ಅವರ ಕೀಳು ಮಾನಸಿಕತೆಯನ್ನು ತೋರಿಸುತ್ತದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಈ ದೇಶ ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ದಿ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಎಲ್ಲಾ ಸಮುದಾಯ, ಜನಾಂಗದ ಜನರನ್ನು ಸಮಾನವಾಗಿ ಕಾಣುವ,ಸಮ ಸಮಾಜ ಕಟ್ಟುವ ಧ್ಯೇಯವನ್ನು ಹೊಂದಿಕೊಂಡು ಅದನ್ನು ಅನುಷ್ಠಾನ ಗೊಳಿಸುವಲ್ಲಿ ಶ್ರಮಿಸುತ್ತಿರುವ ಜನಾದರಣೀಯ ಜನನಾಯಕ. ಆರೋಗ್ಯದ ಸಮಸ್ಯೆ ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಬರುವಂತದ್ದು. ಹಾಗೆಂದ ಮಾತ್ರಕ್ಕೆ ಅವರನ್ನು ಹೀಯಾಳಿಸುವುದು ಛಲವಾದಿಯವರ ಸಣ್ಣತನವನ್ನು ತೋರಿಸುತ್ತದೆ. ಮಾನವೀಯತೆ ಇರುವ ಯಾವುದೇ ವ್ಯಕ್ತಿ ಇಂತಹ ಕೀಳು ಮಟ್ಟದ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಬಿಜೆಪಿಗರಿಗೆ ಇಂತಹ ನೀಚ ಸಂಸ್ಕಾರವನ್ನು ಅವರ ಪಕ್ಷದಲ್ಲಿ ಕಲಿಸುತ್ತಾರೆ ಎನ್ನುವುದಕ್ಕೆ ಛಲವಾದಿಯವರ ಮಾತುಗಳೇ ಸಾಕ್ಷಿ.
ತಾನು ನಾಯಕನಾಗಿ ಬಿಂಬಿಸಿಕೊಳ್ಳಬೇಕು ಎನ್ನುವ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡಿದರೆ ಮುಂದೊಂದು ದಿನ ರಾಜ್ಯದ ಜನತೆ ತಕ್ಕ ಉತ್ತರ ನೀಡುತ್ತದೆ ಎನ್ನುವುದನ್ನು ಛಲವಾದಿ ನಾರಾಯಣ ಸ್ವಾಮಿ ಮರೆಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಡಿನೋವಿನ ವಿಷಯದಲ್ಲಿ ಗೇಲಿ ಮಾಡಿ, ಅವರ ನೋವನ್ನು ಅಪಹಾಸ್ಯ ಮಾಡಿದ್ದು ಸರಿಯಲ್ಲ. ಛಲವಾದಿಯವರ ಇಂತಹ ಕೀಳು ಮನಸ್ಥಿತಿಗೆ ಕೂಡಲೇ ಸಿದ್ದರಾಮಯ್ಯ ಅವರಲ್ಲಿ ಕ್ಷಮೆ ಕೇಳುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.