ಜಂತುಹುಳು ನಾಶದಿಂದ ಮಕ್ಕಳ ಬೆಳವಣಿಗೆ ಉತ್ತಮ- ಪ್ರಮೋದ್ ಮಧ್ವರಾಜ್
ಉಡುಪಿ: ಜಂತುಹುಳುಗಳು ಮಕ್ಕಳ ಬೆಳವಣಿಗೆಗೆ ಕಂಟಕಪ್ರಾಯವಾಗಿದ್ದು, ಜಂತುಹುಳುಗಳನ್ನು ನಾಶಪಡಿಸುವುದರಿಂದ ಮಕ್ಕಳು ಆರೋಗ್ಯಕರವಾಗಿ ಬೆಳವಣಿಗೆಯಾಗಲು ಸಾಧ್ಯ ಎಂದು ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಗುರುವಾರ ಅಜ್ಜರಕಾಡು ವಿವೇಕಾನಂದ ಶಾಲೆಯಲ್ಲಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಜಂತುಹುಳು ನಾಶಪಡಿಸುವ ಆಲ್ಬೆಂಡಝೋಲ್ ಮಾತ್ರೆಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಆರೋಗ್ಯವಂತ ಮಕ್ಕಳು, ಅರೋಗ್ಯವಂತ ದೇಶದ ಬೆಳವಣಿಗೆಗೆ ಕಾರಣ, ಮಕ್ಕಳು ಪೌಷ್ಠಿಕಾಂಶದಿಂದ ಕೂಡಿದ ಆಹಾರವನ್ನು ಸೇವಿಸಿದರೂ ಸಹ ಜಂತುಹುಳುಗಳ ಬಾಧೆಯಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಉಂಟಾಗಿ ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವುದರಿಂದ , ಬೆಳವಣಿಗೆ ಕುಂಠಿತಗೊಳ್ಳಲಿದೆ ಆದ್ದರಿಂದ ಜಿಲ್ಲೆಯಲ್ಲಿನ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಮಾತ್ರೆಗಳನ್ನು ವಿತರಿಸುವಂತೆ ಸೂಚಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳು ಜಂತುಹಳು ಮಾತ್ರೆಯಿಂದ ವಂಚಿತರಾಗದಂತೆ ತಡೆಯಲು ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲೆಯ ಪ್ರತಿ ಮನೆಮನೆಗೆ ಮಾತ್ರೆಗಳನ್ನು ತಲುಪಿಸುವಂತೆ ಮಾಡಲು ಹಾಗೂ ಈ ಕುರಿತು ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಸ್ವಾಗತಿಸಿ, ಪ್ರ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಒಟ್ಟು 243000 ಮಕ್ಕಳಿಗೆ ಜಂತುಹುಳು ಮಾತ್ರೆ ವಿತರಿಸುವ ಗುರಿ ಇದ್ದು, ಬಿಟ್ಟುಹೋದ ಮಕ್ಕಳಿಗಾಗಿ ಆಗಸ್ಟ್ 17 ರಂದು ಮಾತ್ರೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಉಪಾಧ್ಯ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಉಪಸ್ಥಿತರಿದ್ದರು.