ಜಂತು ಹುಳ ಬಾಧೆಯಿಂದ ಮಕ್ಕಳ ಭವಿಷ್ಯಕ್ಕೆ ಮಾರಕ -ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು : ಜಂತುಹುಳ ಬಾಧೆಯಿಂದ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಸಾಮಥ್ರ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಉಂಟಾಗುತ್ತದೆ. ಈ ಜಂತುಹುಳ ಬಾಧೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ಥರಾಗಿ ತರಗತಿಯಲ್ಲಿ ಪಾಠದ ಮೇಲೆ ಏಕಾಗ್ರತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೋಮವಾರ ಮಂಗಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಣ್ಣಗುಡ್ಡೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ದ.ಕ. ಜಿಲ್ಲೆ ಇವರ ಆಶ್ರಯದಲ್ಲಿ ರಾಷ್ಟೀಯ ಜಂತುಹುಳ ನಿವಾರಣಾ ದಿನ ಮತ್ತು ಸೊಳ್ಳೆ ನಿರೋಧಕ ಔಷದಿಯುಕ್ತ ಸೊಳ್ಳೆ ಪರದೆಗಳ ವಿತರಣೆ ಸಮಾರಂಭವನ್ನು ಉದ್ಘಾಟಸಿ ಮಾತನಾಡಿದ ಅವರು ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಬಾಧೆಯಾಗಿದ್ದು, ಮಕ್ಕಳು ಯಾವಾಗಲೂ ಶುದ್ಧ ನೀರನ್ನು ಕುಡಿಯಬೇಕು, ಹಣ್ಣು ಮತ್ತು ತರಕಾರಿಗಳನ್ನು ತೊಳೆದು ಸೇವಿಸಬೇಕು, ವಿಶೇಷವಾಗಿ ಆಹಾರ ಸೇವಿಸುವ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಸಾಬೂನಿಂದ ಕೈ ತೊಳೆದುಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಹಿಂದಿನ ವರ್ಷವೂ ಮಂಗಳೂರಿನಲ್ಲಿ ಡೆಂಗ್ಯೂ ಜ್ವರದಿಂದ ಸುಮಾರು 10 ರಿಂದ 12 ಜನರು ಬಲಿಯಾದರು, ಅದರಂತೆ ಇತ್ತೀಚಿನ ದಿನಗಳಲ್ಲಿ ಮಲೇರಿಯಾ ರೋಗವು ಜಿಲ್ಲೆಯದಾದ್ಯಂತ ಹೆಚ್ಚಾಗಿ ಹರಡುತ್ತಿದೆ, ಅದರಿಂದ ಸರಕಾರವು 90 ಸಾವಿರ ರೋಗ ನಿರೋಧಕ ಸೊಳ್ಳೆ ಪರದೆ ಉಚಿತವಾಗಿ ನೀಡುತ್ತಿದೆ. ಈ ಪರದೆಯು ಪ್ರತಿಯೊಂದು ಮನೆಯಲ್ಲಿ ಬಳಕೆ ಮಾಡಿ ಮಲೇರಿಯಾ ಬರದಂತೆ ನಾವು ತಡೆಯಬೇಕು ಹಾಗೂ ಜಿಲ್ಲೆಯ ಜನತೆ ಕೊರೊನ ವೈರಸ್ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಅದರ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಸರಕಾರವು ಈ ಜಂತುಹುಳ ನಿವಾರಣೆ ಬಗ್ಗೆ ವಿಶೇಷವಾದ ಕಾಳಜಿಯನ್ನು ತೆಗೆದುಕೊಂಡಿದೆ. ಈ ಮಾತ್ರೆಯನ್ನು ಉಪಯೋಗಿಸುವುದರಿಂದ ಮಕ್ಕಳಲ್ಲಿ ಸಮಸ್ಯೆ ಕಾಣುವುದಿಲ್ಲ ಹಾಗೂ ಎಲ್ಲಾ ಮಕ್ಕಳು ಮಾತ್ರೆಯನ್ನು ಸೇವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಡಿಡಿಪಿಐ ಮಲ್ಲೇಸ್ವಾಮೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್ ಮತ್ತಿತರು ಉಪಸ್ಥಿತರಿದ್ದರು.