ಜನರು ಕಾನೂನು ಪಾಲಿಸಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಹಕಾರ ನೀಡಿ – ಶಾಂತವೀರ ಶಿವಪ್ಪ
ಉಡುಪಿ: ಜನರು ಕಾನೂನು ಪಾಲನೆ ಮಾಡುವುದನ್ನು ಮರೆಯದೆ ಪೊಲೀಸರಿಗೆ ಅವರ ಕರ್ತವ್ಯ ನಿರ್ವಹಣೆಯಲ್ಲಿ ಸಹಕಾರ ನೀಡಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಅವರು ಹೇಳಿದರು.
ಅವರು ಶನಿವಾರ ಉಡುಪಿ ಜಿಲ್ಲಾ ಚಂದು ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಡಿ ಕಾಯುವ ಸೈನಿಕರು ಮರಣ ಹೊಂದಿದಾಗ ಅವರ ಬಗ್ಗೆ ಜನರು ಹೆಚ್ಚು ಮಾತನಾಡುತ್ತಾರೆ ಆದರೆ ಶಾಂತಿ ಕಾಪಾಡುವಾಗ ಜನರ ರಕ್ಷಣೆ ಮಾಡುವಾಗ ಮರಣ ಹೊಂದಿದ ಪೊಲೀಸ್ ಸಿಬಂದಿಗಳ ಕರ್ತವ್ಯದ ಬಗ್ಗೆ ಜನರು ಮಾತನಾಡುವುದು ಕಡಿಮೆ. ಕೇವಲ ಒಂದು ದಿನದ ಬೇಸರವನ್ನು ವ್ಯಕ್ತಪಡಿಸಿ ಮತ್ತೆ ಅದನ್ನು ಮರೆತು ಬಿಡುತ್ತೇವೆ. ಜನರು ಕಾನೂನು ಪಾಲನೆ ಮಾಡುವುದನ್ನು ಮರೆಯದೆ ಪೊಲೀಸರಿಗೆ ಅವರ ಕರ್ತವ್ಯ ನಿರ್ವಹಣೆಯಲ್ಲಿ ಸಹಕಾರ ನೀಡಬೇಕು. ಮೊದಲಿಗಿಂತ ಈಗಿನ ಪೊಲೀಸ್ ವ್ಯವಸ್ಥೆ ಸುಧಾರಿಸಿದ್ದು, ಇದರಿಂದ ಪೊಲೀಸರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಜಿಲ್ಲಾ ಪೋಲಿಸ್ ಇಲಾಖೆ, ಸಾರ್ವಜನಿಕರು ಪರವಾಗಿ ಹುತಾತ್ಮರಾದ ಪೊಲೀಸ್ ಸಿಬಂದಿಗಳಿಗೆ ಗೌರವ ನಮನ ಸಲ್ಲಿಸಲಾಯಿತು. ಹುತಾತ್ಮ ಪೊಲೀಸರಿಗೆ ಗೌರವ ಸೂಚಕವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಮಾತನಾಡಿ , 1959ರ ಅ. 21ರಂದು ಚೀನಾ-ಭಾರತ ಗಡಿ ಭಾಗದ ಹಾಟ್ ಸ್ಟ್ರೀಗ್ ಪೋಸ್ಟ್ ಹತ್ತಿರ ಸಿಆರ್ಪಿಎಫ್ ಡಿಎಸ್ಪಿ ಕರಣಸಿಂಗ್ ನೇತೃತ್ವದಲ್ಲಿಪೊಲೀಸ್ ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತಾ್ರಸ್ತ್ರಗಳನ್ನು ಹೊಂದಿರುವ ಚೀನಾ ಸೈನಿಕರಿಂದ ಏಕಾಏಕಿ ದಾಳಿ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿವೈರಿಗಳ ದಾಳಿಗೆ ವಿಚಲಿತರಾಗದೆ ತಮ್ಮ ಪ್ರಾಣದ ಹಂಗು ತೊರೆದು ಕೊನೆಯುಸಿರಿನವರೆಗೂ ಧೈರ್ಯದಿಂದ ಹೋರಾಡಿ ಪ್ರಾಣ ತೆತ್ತ 10 ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆ ಪ್ರತೀಕವಾಗಿ ಪ್ರತಿ ವರ್ಷ ಅ.21ರಂದು ದೇಶಾದ್ಯಂತ ಎಲ್ಲಜಿಲ್ಲಾಪೊಲೀಸ್ ಕೇಂದ್ರ ಸ್ಥಾನಗಳಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಒಂದು ವರ್ಷದ ಅವಧಿಯಲ್ಲಿದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು 189 ಪೊಲೀಸರು ಸೇವೆಯಲ್ಲಿಪ್ರಾಣಾರ್ಪಣೆ ಮಾಡಿದ್ದಾರೆ. ಇವರಲ್ಲಿ ಕರ್ನಾಟಕದ 16 ಧೀರ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಸಿಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಉಪ ಅರಣ್ಯ ಸಂರಕ್ಷಣಾಧಿಕಾಇರ ಕುಂದಾಪುರ ವಿಭಾಗದ ಉದಯ್ ಎಮ್ ನಾಯಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಟಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.