ಜನರ ಬಹು ಕಾಲದ ಬೇಡಿಕೆ ಈಡೇರಿಸುವ ಭಾಗ್ಯ ನನ್ನದಾಯಿತು- ವಿನಯ ಕುಮಾರ್ ಸೊರಕೆ
ಉದ್ಯಾವರ: ಈ ಭಾಗದ ಜನರ ಬಹುಕಾಲದ ಬೇಡಿಕೆ ಜಾರುಕುದ್ರುಗೆ ಸಂಪರ್ಕ ಸೇತುವೆ ರಚನೆ. ನಾನು ಶಾಸಕನಾಗಿ ಆಯ್ಕೆಯಾಗಿ ಪ್ರಾರಂಭದಲ್ಲಿ ಈ ಪ್ರದೇಶಕ್ಕೆ ಬಂದು ಈ ಸೇತುವೆ ನಿರ್ಮಾಣಕ್ಕೆ ನನ್ನ ಶಕ್ತಿ ಮೀರಿ ಪ್ರಯತ್ನವನ್ನು ಮಾಡುತ್ತೇನೆ ಎಂದು ಮಾತನ್ನು ಕೊಟ್ಟದ್ದೆ ಇಂದು ಈ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತಹ ಮತ್ತು ಜನರ ಬಹು ಕಾಲದ ಬೇಡಿಕೆಯನ್ನು ಈಡೇರಿಸುವ ಭಾಗ್ಯ ನನ್ನದಾಯಿತು ಎಂದು ಮಾಜಿ ಸಚಿವರು ಕಾಪು ಶಾಸಕರಾದ ವಿನಯಕುಮಾರ್ ಸೊರಕೆಯವರು “ ಗಾಂಧಿ ಪಥ ಗ್ರಾಮ ಪಥ ಯೋಜನೆ” (ನಮ್ಮ ಗ್ರಾಮ ನಮ್ಮ ರಸ್ತೆ ಹಂತ 5)ಯಲ್ಲಿ ಮಂಜೂರಾದ ಉದ್ಯಾವರ ಪಿತ್ರೋಡಿ ಜಾರುಕುದುರು ಸೇತುವೆ ಕಾಮಗಾರಿಗೆ ಶಿಲಾನ್ಯಾಸವನ್ನು ಮಾಡಿ ಹರ್ಷಚಿತ್ತರಾಗಿ ನುಡಿದರು.
ಈ ಯೋಜನೆ 210 ಮೀಟರ್ ಉದ್ದದ ಸೇತುವೆಯೊಂದಿಗೆ 510 ಮೀಟರ್ ರಸ್ತೆಯನ್ನು ಹೊಂದಿದ್ದು 10 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ಹೊಂದಿರುತ್ತದೆ. ಈ ಸೇತುವೆ ನಿಮಾಣ ಪೂರ್ಣಗೊಂಡಾಗ ಜಾರುಕುದ್ರು ಪ್ರದೇಶ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲಿದೆ ಇದಲ್ಲದೆ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಓಸ್ಕರ್ ಫೆರ್ನಾಂಡಿಸ್ ಮತ್ತು ಶಾಸಕರ ಅನುದಾನದಿಂದ ಮಂಜೂರಾದ ಸುಮಾರು 1 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆಯನ್ನು ಶಾಸಕರು ನೆರವೇರಿಸಿದರು.
ಇಡೀ ರಾಜ್ಯದಲ್ಲೇ ಗರಿಷ್ಟ 47 ಕೋಟಿಗಳ ಅನುದಾನ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಕಾಪು ಕ್ಷೇತ್ರಕ್ಕೆ ಮಂಜೂರಾಗಿದ್ದು ಅವೆಲ್ಲಾ ಕೆಲಸಗಳು ಶೀಘ್ರವಾಗಿ ಪ್ರಾರಂಭಗೊಳ್ಳಲಿದೆ. ಕೇಂದ್ರ ರಸ್ತೆ ನಿಧಿಯಿಂದ 49 ಕೋಟಿ ರೂಪಾಯಿಗಳ ಅನುದಾನವು ಕಾಪು ಕ್ಷೇತ್ರಕ್ಕೆ ಮಂಜೂರಾಗಿರುತ್ತದೆ. ತನ್ನ ಶಾಸಕ ಅವಧಿಯು ಪೂರ್ಣಗೊಳ್ಳುವ ಹೊತ್ತಿಗೆ ಗರಿಷ್ಟ ಪ್ರಮಾಣದ ಜನರ ಮುಲಭೂತ ಬೇಡಿಕೆಯನ್ನು ಪೂರೈಸುವಂತಹ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಇದಕ್ಕಾಗಿ ತಾವು ನನಗೆ ಶಕ್ತಿಯನ್ನು ತುಂಬಬೇಕು ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಉದ್ಯಾವರದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ ದಿ. ಮಂಜುನಾಥ ಉದ್ಯಾವರ ಅವರನ್ನು ನೆನಪಿಸಿಕೊಂಡ ಶಾಸಕರು ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ನನ್ನೊಂದಿಗೆ ಕೈಜೋಡಿಸುತ್ತಿರುವ ಮಾಜಿ ಕೇಂದ್ರ ಸಚಿವರು ರಾಜ್ಯ ಸಭಾ ಸದಸ್ಯರಾದ ಓಸ್ಕರ್ ಫೆರ್ನಾಂಡಿಸ್ರವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಜಾರುಕುದ್ರುನ ನಿವಾಸಿಗರ ಪರವಾಗಿ ಹಿರಿಯರಾದ ಸಂಜೀವ ಪೂಜಾರಿಯವರು ಶಾಸಕರಿಗೆ ಕೃತಜ್ಞತಾ ಪೂರ್ವಕವಾಗಿ ಹಾರ ಹಾಕಿ ಗೌರವಿಸಿದರು. ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಸ್ಥಳೀಯ ಸದಸ್ಯರುಗಳಾದ ಗಿರೀಶ್ ಸುವರ್ಣ, ಗ್ಲಾಡಿಸ್ ಮೆಂಡೊನ್ಸಾ, ರಾಜೀವಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸರಸು ಡಿ. ಬಂಗೇರ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ಕುಮಾರ್, ಪಿ.ಎಮ್.ಜಿ.ಎಸ್.ವೈ. ಯೋಜನಾ ವಿಭಾಗದ ಅಭಿಯಂತರರಾದ ಸತೀಶ್ ಕುಮಾರ್, ಉದ್ಯಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮಾನಂದ ಪುರಾಣಿಕ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉದ್ಯಾವರ ನಾಗೇಶ್ ಕುಮಾರ್ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಪಂಚಾಯತ್ ಸದಸ್ಯರಾದ ಲೋರೆನ್ಸ್ ಡೇಸಾ ವಂದಿಸಿದರು. ಆಬಿದ್ ಆಲಿಯವರು ಕಾರ್ಯಕ್ರಮ ನಿರ್ವಹಿಸಿದರು.