ಜನವರಿ 1 ರಿಂದ ನೊಂದಣಿಯಾಗದ ಪಿಜಿ  ಬಂದ್-ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

Spread the love

ಜನವರಿ 1 ರಿಂದ ನೊಂದಣಿಯಾಗದ ಪಿಜಿ  ಬಂದ್-ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಜಿಗಳ ವಿರುದ್ದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿರುವ ಎಲ್ಲಾ ಪಿ.ಜಿಗಳು ಕಡ್ಡಾಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಡಿಸೆಂಬರ್ 31 ರೊಳಗೆ ನೊಂದಣಿಯಾಗಬೇಕು, ಇಲ್ಲವಾದಲ್ಲಿ ಜನವರಿ 1 ರಿಂದ ಅಂತಹ ಪಿಜಿಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಮೊದಲು ಪಿಜಿಗಳ ನೊಂದಾವಣೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಆ ಸಮಯದಲ್ಲಿ ಕೇವಲ 8 ಸಂಸ್ಥೆಗಳು ಮಾತ್ರ ಅರ್ಜಿ ನೊಂದಣಿಗಾಗಿ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಹಲವು ಅನಧಿಕೃತ ಪಿ.ಜಿ.ಗಳು ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾಭ್ಯಾಸ ನಿರತ ಮತ್ತು ಉದ್ಯೋಗಸ್ಥ ಮಹಿಳೆಯರು ವಾಸಿಸಲು ಅನುವು ಮಾಡಿಕೊಟ್ಟಿರುವ ಪಿ.ಜಿಗಳು ಸೇರಿದಂತೆ ಜಿಲ್ಲೆಯಲ್ಲಿನ ಎಲ್ಲಾ ಪಿ.ಜಿ.ಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಡಿಸೆಂಬರ್ 31 ರ ಒಳಗೆ ಕಡ್ಡಾಯವಾಗಿ ನೋಂದಣಿಯಾಗಬೇಕು. ಇಲ್ಲವಾದಲ್ಲಿ ನೊಂದಣಿಯಾಗದ ಪಿ.ಜಿ.ಗಳನ್ನು ಜನವರಿ 1 ರಿಂದ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಜಿ.ಜಗದೀಶ್ ಸೂಚಿಸಿದ್ದಾರೆ.

ನೋಂದಣಿಯಾದ ಪಿ.ಜಿಗಳ ವಿವರಗಳನ್ನು ಜಿಲ್ಲೆಯ ಆರಕ್ಷಕ ಠಾಣೆಗೆ ರವಾನಿಸಿ, ಠಾಣೆಯಿಂದ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಪಿ.ಜಿಗಳಲ್ಲಿ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಮಹಿಳೆಯರಿಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ಮತ್ತು ಎಲ್ಲ ರೀತಿಯ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಎಲ್ಲಾ ಪಿ.ಜಿ.ಗಳ ಮುಖ್ಯಸ್ಥರಿಗೆ ಸೂಚಿಸಿದರು.

ಕಟಪಾಡಿಯಲ್ಲಿ ಮಹಿಳಾ ಮಂಡಳಿಯಿಂದ ನೂತನವಾಗಿ ನಿರ್ಮಿಸಲಾಗುವ ವಸತಿಗೃಹದ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಬಗ್ಗೆ ಹಾಗೂ ಮಣಿಪಾಲದಲ್ಲಿನ ಉದ್ಯೋಗಸ್ಥ ಮಹಿಳೆಯರ ವಸತಿಗೃಹದ ದುರಸ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಾ ಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವೀಣಾ ವಿವೇಕಾನಂದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love