Home Mangalorean News Kannada News ಜನವರಿ 6 ರಂದು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ಉಧ್ಘಾಟನೆ

ಜನವರಿ 6 ರಂದು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ಉಧ್ಘಾಟನೆ

Spread the love

ಜನವರಿ 6 ರಂದು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ಉಧ್ಘಾಟನೆ

ಉಡುಪಿ : “ಕಡಲ ತಾರೆ” ಎಂದು ಜನಜನಿತವಾಗಿರುವ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ಹಲವು ವರ್ಷಗಳಿಂದ ಪ್ರಪಂಚದ ನಾನಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತಿದೆ. ನೂತನವಾಗಿ ನಿರ್ಮಿಸಲ್ಪಟ್ಟ ಹಡಗು ಮಾದರಿಯ ಈ ಚರ್ಚ್ ಜನವರಿ 6, 2018 ರಂದು ಉಧ್ಘಾಟನೆಗೊಳ್ಳಲಿದೆ

ಚರಿತ್ರೆ:
ಆಸುಪಾಸಿನ ಕುಟುಂಬಗಳ ಧಾರ್ಮಿಕ್ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ 1972 ರಲ್ಲಿ ದಿ.ಫಾ! ಚಾರ್ಲ್ಸ್ ಡಿ’ಸೋಜಾರವರು ಸಣ್ಣ ಮಟ್ಟದಲ್ಲಿ ಸ್ಟೆಲ್ಲಾ ಮಾರಿಸ್ ಚಾಪೆಲ್ ಅನ್ನು ಕಟ್ಟಿಸಿದರು. 1991 ರಲ್ಲಿ ಇದನ್ನು ಪೂರ್ಣ ಪ್ರಮಾಣದ ಇಗರ್ಜಿಯಾಗಿ ಘೋಷಿಸಲಾಯಿತು.

ಈ ಇಗರ್ಜಿಗೆ ಮೊದಲಬಾರಿ ರೆಸಿಡೆಂಟ್ ಧರ್ಮಗುರುಗಳಾಗಿ ಬಂದ ಫಾ! ಡೆನಿಸ್ ಕ್ಯಾಸ್ತೆಲಿನೊರವರ ಸೇವಾವಧಿಯಲ್ಲಿ (07-06-1987 ರಿಂದ 30-06-1994) ಆರೋಗ್ಯ ಮಾತೆಯಾಗಿ ಪ್ರಸಿದ್ಧಿಯಾಗಿರುವ ವೆಲ್ಲಂಕಣಿ ಮಾತೆಗೆ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ಇಲ್ಲಿ ಆರಂಭವಾಯಿತು. ಫಾ! ಡೆನಿಸ್ ಕ್ಯಾಸ್ತೆಲಿನೊರವರು ಕಾರ್ಕಳದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವಾಗ ಅವರಿಗೆ ದೊರೆತ ಆಶೀರ್ವಾದದ ಕುರುಹುವಾಗಿ ಅವರು ಇಲ್ಲಿ ಪವಾಡ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಆಗಸ್ಟ್ 15, 1988 ರಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಆಗಿದ್ದ ಡಾ! ಬಾಸಿಲ್ ಡಿ’ಸೋಜಾರವರು ಮೂರ್ತಿಯನ್ನು ಆಶೀರ್ವದಿಸಿದರು.
ಫಾ! ಮ್ಯಾಕ್ಸಿಮ್ ಮಿಸ್ಕಿತ್ ರವರ ಅವಧಿಯಲ್ಲಿ ಚುರ್ಚಿನ ಹೊರಭಾಗದಲ್ಲಿ ಒಂದು ಪ್ರತ್ಯೇಕ ಗುಡಿಯನ್ನು ನಿರ್ಮಿಸಲಾಯಿತು ಮತ್ತು ಇದನ್ನು ಆಗಸ್ಟ್ 15, 2010 ರಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ! ಅಲೋಶಿಯಸ್ ಪಾಲ್ ಡಿ’ಸೋಜಾರವರು ಉಧ್ಘಾಟಿಸಿದರು. ಇದೇ ದಿನದಂದು ಶವಸಂಸ್ಕಾರಕ್ಕೆ ಅಗತ್ಯವಿರುವ ಕಾಂಕ್ರೀಟ್ ಪೌಳಿಗೋಡೆಯಿರುವ ಸಮಾಧಿ ಸ್ಥಳ ಸಹ ಉದ್ಘಾಟನೆಗೊಂಡು ಚರ್ಚ್ ಭಾಂದವರ ಬಹುದಿನಗಳ ಕನಸು ಈಡೇರಿತು.
ಹಲವಾರು ವರ್ಷಗಳಿಂದ ಯಾತ್ರಾರ್ಥಿಗಳು ಇಲ್ಲಿ ಭೇಟಿ ನೀಡಿ, ನಿರಂತರ ಪ್ರಾರ್ಥನೆಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡಿದ್ದಾರೆ. ವಿಶೇಷವಾಗಿ ಪ್ರತಿ ಶನಿವಾರ ನಡೆಯುವ ನೊವೇನಾ ಪ್ರಾರ್ಥನೆಗಳು ಅನೇಕರ ಬದುಕಿನಲ್ಲಿ ಬೆಳಕನ್ನು ಮೂಡಿಸಿವೆ. ವೆಲಂಕಣಿ ಮಾತೆಯ ಮೂಲಕ ನಡೆದ ಪವಾಡಗಳು ಮತ್ತು ದೊರಕಿದ ಪ್ರಯೋಜನಗಳ ಬಗ್ಗೆ ಇಲ್ಲಿನ ಚರ್ಚ್ ಸದಸ್ಯರು ಮತ್ತು ಭೇಟಿ ನೀಡುವ ಭಕ್ತಾದಿಗಳು ಸಾಕ್ಷಿ ಹೇಳಿದ್ದಾರೆ. ಎಲ್ಲಾ ಧರ್ಮ ಮತ್ತು ಸಮುದಾಯದ ಜನರು ಇಲ್ಲಿ ಪ್ರಾರ್ಥಿಸಲು ಬರುತ್ತಾರೆ.
ಕಳೆದ 29 ವರ್ಷಗಳಲ್ಲಿ ಆರು ಮಂದಿ ಧರ್ಮಗುರುಗಳು ಇಲ್ಲಿ ಶ್ರದ್ದೆಯಿಂದ ಸೇವೆ ಸಲ್ಲಿಸಿದ್ದಾರೆ. ಫಾ! ಡೆನಿಸ್ ಕ್ಯಾಸ್ತೆಲಿನೊರವರ ಬಳಿಕ ಫಾ!ರಾಬರ್ಟ್ ಪಿಂಟೋ, ಫಾ! ಐವನ್ ಡಿ’ಮೆಲ್ಲೋ, ಫಾ! ರಿಚರ್ಡ್ ಮಸ್ಕರೇನ್ಹಸ್, ಫಾ! ಮ್ಯಾಕ್ಸಿಮ್ ಮಿಸ್ಕಿತ್ ಮತ್ತು ಫಾ! ಜೋಸೆಫ್ ಡಿ’ಸೋಜಾರವರು ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಫಾ! ಅಲ್ಬನ್ ಡಿ’ಸೋಜಾರವರು ಇಲ್ಲಿ ಸೇವೆ ಸಲ್ಲಿಸಿರುತ್ತಾರೆ.
ವಿನ್ಯಾಸ :-
ಫಾ! ಅಲ್ಬನ್ ಡಿ’ಸೋಜಾರವರು ಕಲ್ಮಾಡಿಗೆ ಬಂದ ನಂತರ ಹೊಸ ಚರ್ಚ್ ನಿರ್ಮಿಸುವ ಪ್ರಸ್ತಾಪವನ್ನು ಜನರ ಮುಂದೆ ಇಟ್ಟಾಗ ಎಲ್ಲರೂ ಸಂತೋಷದಿಂದ ಒಪ್ಪಿಗೆ ನೀಡಿದರು. ಸುಮಾರು 6 ರಿಂದ 7 ಕೋಟಿ ರೂಪಾಯಿಗಳ ಯೋಜನೆಯಡಿಯಲ್ಲಿ ಹಡಗಿನಾಕಾರದ ಚರ್ಚ್, ವೆಲ್ಲಂಕಣಿ ಮಾತೆಯ ಪುಣ್ಯಕ್ಷೇತ್ರ, ಕಾಪು ಲೈಟ್ ಹೌಸ್ ಮಾದರಿಯ ಗಂಟೆ ಗೋಪುರ ಮತ್ತು ಸಣ್ಣ ಹಾಲ್ ಇರುವಂತಹ ಧರ್ಮಗುರುಗಳ ನಿವಾಸ ಇವುಗಳನ್ನು ನಿರ್ಮಿಸುವ ಕಠಿಣ ಸವಾಲು ಫಾ! ಅಲ್ಬನ್ ಡಿ’ಸೋಜಾರವರ ಮುಂದೆ ಇದ್ದು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಪ್ರಪಂಚದಲ್ಲಿ ಬೆರಳೆಣಿಕೆಯ ಮತ್ತು ಕರ್ನಾಟಕದಲ್ಲೇ ಮೊದಲನೆಯ ಹಡಗಿನಾಕಾರದ ಈ ಚರ್ಚಿನ ಒಟ್ಟು ವಿಸ್ತೀರ್ಣ 10,000 ಚ. ಮೀ. ಆಗಿದ್ದು ಏಕಕಾಲದಲ್ಲಿ ಒಟ್ಟು 800 ಮಂದಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಸಂಪೂರ್ಣ ಮರದ ಹಲಗೆಗಳನ್ನೊಳಗೊಂಡ ಪ್ರಶಾಂತವಾದ ಪ್ರಾರ್ಥನಾ ವೇದಿಕೆಯು ಭಕ್ತಾದಿಗಳಿಗೆ ಪ್ರಾರ್ಥನೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿರುತ್ತದೆ.
ಹೊಸ ಚರ್ಚಿನ ಉಧ್ಘಾಟನೆ ಮತ್ತು ಆಶೀರ್ವಚನ
ಕಲ್ಮಾಡಿ ಸ್ಟೆಲ್ಲಾ ಮಾರಿಸ್ ನೂತನ ಚರ್ಚಿನ ಆಶೀರ್ವಚನಾ, ಉಧ್ಘಾಟನೆ ಪ್ರಯುಕ್ತ ವಿವಿಧ ಧಾರ್ಮಿಕ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಿನಾಂಕ 03-01- 2018 ಹಾಗೂ 06-01-2018 ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ:
03-01- 2018 ಬುಧವಾರ ಮಧ್ಯಾಹ್ನ 2-30 ಗಂಟೆಗೆ ಹೊರೆ ಕಾಣಿಕೆ ಸಮರ್ಪಣಾ ಮೆರವಣಿಗೆ ಮಲ್ಪೆ ಬಸ್ ಸ್ಟಾಂಡ್ ನಲ್ಲಿ ಉಧ್ಘಟನೆಗೊಂಡು ರಾಜ್ಯ ಹೆದ್ದಾರಿ, ಫಿಶರೀಸ್ ಸ್ಕೂಲ್, ಕಲ್ಮಾಡಿ ಬ್ರಿಜ್ ಮೂಲಕ ಹಾದು ಸ್ಟೆಲ್ಲಾ ಮಾರಿಸ್ ದೇವಾಲಯ ಆವರಣದಲ್ಲಿ ಮುಕ್ತಾಯಗೊಳ್ಳುವುದು. ಈ ಮೆರವಣಿಗೆಯಲ್ಲಿ ಸರ್ವ ಧರ್ಮದವರು ಭಾಗವಹಿಸುವವರಿದ್ದು, ವೇಷಭೂಷಣ, ಹುಲಿವೇಷ, ನಾಸಿಕ್ ಬ್ಯಾಂಡ್, ಶಾಲಾ ಮಕ್ಕಳ ಬ್ಯಾಂಡ್, ಟ್ಯಾಬ್ಲೋ, ಜೊತೆಗೆ 100 ಕ್ಕೂ ಮೀರಿ ಹೊರೆ ಕಾಣಿಕೆ ಹೊತ್ತ ವಾಹನಗಳೊಂದಿಗೆ ಸುಮಾರು 2000 ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಕರ್ನಾಟಕ ಸರಕಾರದ ಯುವಜನಸೇವೆ ಮತ್ತು ಕ್ರೀಡೆ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಪ್ರಮೋದ್ ಮಧ್ವರಾಜ್ ರವರು ಮೆರವಣಿಗೆಗೆ ಚಾಲನೆ ನೀಡಲಿದ್ದು ಮಾಂಡವಿ ರಿಯಲ್ ಎಸ್ಟೇಟ್ ಡೆವೆಲಪರ್ಸ್ ನ ಆಡಳಿತ ನಿರ್ದೇಶಕರಾಗಿರುವ ಶ್ರೀಯುತ ಜೆರ್ರಿ ವಿನ್ಸೆಂಟ್ ಡಯಾಸ್ ರವರು ಉಪಸ್ಥಿತರಿರುವರು.
ಅದೇ ದಿನ ಸಂಜೆ 4:30 ಗಂಟೆಗೆ ಸ್ಟೆಲ್ಲಾ ಮಾರಿಸ್ ದೇವಾಲಯದ ಆವರಣದಲ್ಲಿ ಅಂತರ್ ಧರ್ಮೀಯ ಸೌಹಾರ್ದ ಕೂಟ ಸಭಾ ಕಾರ್ಯಕ್ರಮ ನಡೆಯಲಿರುವುದು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ ರವರು ಅಧ್ಯಕ್ಷತೆ ವಹಿಸಲಿರುವರು. ಶ್ರೀ ಬಾರಕೂರು ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಶ್ರೀ ಡಾ|ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು, ಉಡುಪಿ ಡಿಯೋಸಿಸ್ ಚಾನ್ಸಲರ್ ಆಗಿರುವ ಫಾ|ವಲೇರಿಯನ್ ಮೆಂಡೋನ್ಸಾ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖ್ಯಸ್ಥರಾಗಿರುವ ಶ್ರೀ.ಮೊಹಮ್ಮದ್ ಯಾಸೀನ್ ಮಲ್ಪೆ ಇವರು ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವ ಧರ್ಮದವರು ಸೇರಿ ಸುಮಾರು 2000 ಮಂದಿ ಭಾಗವಹಿಸುವ ಸಾಧ್ಯತೆ ಇದೆ.
06-01- 2018 ಶನಿವಾರ ಬೆಳಿಗ್ಗೆ 9:00 ಗಂಟೆಗೆ ನೂತನ ಚರ್ಚಿನ ಉದ್ಘಾಟನೆ, ಆಶೀರ್ವಚನ, ಪ್ರಾರ್ಥನಾ ವಿಧಿ ವಿಧಾನಗಳು ನೆರವೇರಲಿರುವುದು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ! ಜೆರಾಲ್ಡ್ ಐಸಾಕ್ ಲೋಬೊರವರು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ! ಅಲೋಶಿಯಸ್ ಪಾಲ್ ಡಿ’ಸೋಜಾ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ! ಫ್ರಾನ್ಸಿಸ್ ಸೆರಾವೋ, ಗುಲ್ಬರ್ಗ ಧರ್ಮಪ್ರಾಂತ್ಯದ ಬಿಷಪ್ ಡಾ! ರಾಬರ್ಟ್ ಮಿರಾಂಡಾ ಇವರೊಂದಿಗೆ ಕೂಡಿ ಕೃತಜ್ಞತಾ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಪವಿತ್ರ ಸಮಾರಂಭಕ್ಕೆ ಚಾಲನೆ ನೀಡಲಾಗುವುದು. ನಂತರ 11:30 ಗಂಟೆಗೆ ಸಭಾ ಕಾರ್ಯಕ್ರಮಗಳು ನಡೆಯಲಿರುವುದು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ! ಜೆರಾಲ್ಡ್ ಐಸಾಕ್ ಲೋಬೊರವರು ಅಧ್ಯಕ್ಷತೆವಹಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ! ಅಲೋಶಿಯಸ್ ಪಾಲ್ ಡಿ’ಸೋಜಾ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ! ಫ್ರಾನ್ಸಿಸ್ ಸೆರಾವೋ, ಗುಲ್ಬರ್ಗ ಧರ್ಮಪ್ರಾಂತ್ಯದ ಬಿಷಪ್ ಡಾ! ರಾಬರ್ಟ್ ಮಿರಾಂಡಾರವರು, ಮುಖ್ಯ ಅತಿಥಿಗಳಾಗಿರುತ್ತಾರೆ.
ಕರ್ನಾಟಕ ಸರಕಾರದ ಯುವಜನಸೇವೆ ಮತ್ತು ಕ್ರೀಡೆ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಪ್ರಮೋದ್ ಮಧ್ವರಾಜ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು, ರಾಜ್ಯಸಭಾ ಸದಸ್ಯ ಶ್ರೀ ಆಸ್ಕರ್ ಫೆರ್ನಾಂಡಿಸ್, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರು ಮತ್ತು ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜಾ, ಉಡುಪಿ ನಾಗರೆಸಭೆ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಸಭೆ ಸದಸ್ಯ ಶ್ರೀ ನಾರಾಯಣ್ ಪಿ ಕುಂದರ್ ಮತ್ತು ಇನ್ನಿತರರು ಭಾಗವಹಿಸುವ ಸಾಧ್ಯತೆಗಳಿವೆ. ಸಹಭೋಜನದೊಂದಿಗೆ ಸಮಾರಂಭವು ಮುಕ್ತಾಯಗೊಳ್ಳಲಿದೆ. ಉದ್ಘಾಟನೆಯ ಈ ಚಾರಿತ್ರಿಕ ದಿನಕ್ಕೆ ಹೆಚ್ಚಿನ ಮೆರುಗು ನೀಡಲು ಅದೇ ದಿನ ಸಂಜೆ ೫:೩೦ ಕ್ಕೆ “ವಿಲ್ಫಿ ನೈಟ್” ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


Spread the love

Exit mobile version