ಜನಾರ್ದನರೆಡ್ಡಿ- ಬಸವನಗೌಡ ಸಂಭಾಷಣೆ ಬಹಿರಂಗ; ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ: ಉಗ್ರಪ್ಪ ಆರೋಪ
ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ ಅವರೊಂದಿಗೆ ಜನಾರ್ದನರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ ಕೇಳಿಸಿದ ಉಗ್ರಪ್ಪ, ಇದು ಬಿಜೆಪಿ ಕೃತ್ಯಕ್ಕೆ ಸ್ಪಷ್ಟ ಸಾಕ್ಷಿ ಎಂದು ದೂರಿದರು.
ಸಂಭಾಷಣೆಯಲ್ಲಿ ಏನಿದೆ?
ಜನಾರ್ದನರೆಡ್ಡಿ: ಬಸನವಗೌಡ, ಹಿಂದಿನದ್ದು ಕೆಟ್ಟಕಾಲ. ಅದನ್ನು ಮರೆತುಬಿಡು. ಈಗ ನಾನು ಹೇಳಿದಂತೆ ಕೇಳು. ನಮ್ಮ ಟೈಂ ಮತ್ತೆ ಚೆನ್ನಾಗಿ ಆಗ್ತಾ ಇದೆ. ನಿನ್ನ ಜೊತೆಗೆ ನೇರವಾಗಿ ದೊಡ್ಡವರು, ರಾಷ್ಟ್ರೀಯ ಅಧ್ಯಕ್ಷರೇ ಮಾತಾಡ್ತಾರೆ. ಒನ್ ಟು ಒನ್ ಮಾತನಾಡಿ ಮುಂದಿನ ಹೆಜ್ಜೆ ಇಡೋಣ.
ಬಸನವಗೌಡ: ಅದೆಲ್ಲಾ ಏನು ಬೇಡ ಸರ್. ನಿಮ್ಮ ಬಗ್ಗೆ ನನಗೆ ಗೌರವ ಇದೆ. ನನ್ನ ಕೆಟ್ಟ ಗಳಿಗೆಯಲ್ಲಿ ಇವರು ಕೈ ಹಿಡಿದಿದ್ದಾರೆ. ನಾನು ವಿಶ್ವಾಸ ದ್ರೋಹ ಮಾಡಲಾರೆ.
ಜನಾರ್ದನರೆಡ್ಡಿ: ನನ್ನ ಮಾತು ಕೇಳಿ ಶಿವನಗೌಡ ನಾಯಕ ಇವತ್ತು ಏನಾದ ನೋಡು. ನೀನು ಈವರೆಗೆ ಮಾಡಿಕೊಂಡಿರುವ ಆಸ್ತಿಯ ನೂರರಷ್ಟು ಮಾಡಿಕೊಳ್ಳಬಹುದು.
ಬಸವನಗೌಡ: ನನ್ನ ಕೆಟ್ಟ ಕಾಲದಲ್ಲಿ ಟಿಕೆಟ್ ಕೊಡಿಸಿದ್ದಾರೆ. ಎಲೆಕ್ಷನ್ ಮಾಡಲು ಸಹಾಯ ಮಾಡಿದ್ದಾರೆ. ನಾನು ದ್ರೋಹ ಮಾಡಲಾರೆ.
ಪ್ರಜಾವಾಣಿ ವಾರ್ತೆ