ಜನ ಪ್ರತಿನಿಧಿಗಳಿಗೆ ಪೊಲೀಸ್ ನೊಟೀಸ್: ಕಾರ್ಣಿಕ್ ಖಂಡನೆ
ಮಂಗಳೂರು: ಸಾರ್ವಜನಿಕ ಶಾಂತಿ ಪಾಲನೆಯನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿಗಳಿಗೆ ಐಪಿಸಿ 107 ರನ್ವಯ ಮುಚ್ಚಳಿಕೆ ನೀಡುವಂತೆ ನೊಟೀಸ್ ನೀಡಿರುವ ಪೊಲೀಸ್ ಇಲಾಖೆಯ ಕ್ರಮವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಖಂಡಿಸಿದ್ದಾರೆ.
ಕೇರಳ ರಾಜ್ಯಾದ್ಯಂತ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಕೊಲೆಗಾರರಿಗೆ ಹಾಗೂ ಹಲ್ಲೆ ಕೋರರಿಗೆ ಕುಮ್ಮಕ್ಕು ನೀಡುತ್ತಾ ರಕ್ಷಣೆ ನೀಡುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಮ್ಮ ಜಿಲ್ಲೆಗೆ ಬಂದು ಶಾಂತಿ ಸೌಹಾರ್ದದ ಉಪನ್ಯಾಸ ನೀಡುವುದು ಭೂತದ ಬಾಯಿಂದ ಭಗವದ್ಗೀತೆ ಕೇಳಿದಂತೆ ಎಂದಿದ್ದಾರೆ. ಕಾಂಗ್ರೇಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಇಲಾಖೆಯನ್ನು ತನ್ನ ಕೈಗೊಂಬೆ ಮಾಡಿಕೊಂಡು ನಡೆಸುತ್ತಿರುವ ದಬ್ಬಾಳಿಕೆ ಮಿತಿಮೀರಿದ್ದು, ಈಗ ಜನಪ್ರತಿನಿಧಿಗಳಿಗೂ ನೊಟೀಸ್ ಜಾರಿಮಾಡುವ ಹಂತ ತಲುಪಿರುವುದನ್ನು ಅತ್ಯಂತ ಕಟುವಾಗಿ ಟೀಕಿಸಿದ್ದಾರೆ.