ಜಯ್ ಶಾ ಅಕ್ರಮ ಆಸ್ತಿ ಗಳಿಕೆ; ಅಮಿತ್ ಶಾ ರಾಜೀನಾಮೆಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ
ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಅಕ್ರಮ ಆಸ್ತಿ ಗಳಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಕಾಪು ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಜಯ್ ಶಾ ಮೂಲತಃ ಉದ್ಯಮಿಯಾಗಿದ್ದು, ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವುದಕ್ಕಿಂತ ಮೊದಲು ಕಂಪನಿ ನಷ್ಟದಲ್ಲಿತ್ತು. ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಒಂದೇ ವರ್ಷದಲ್ಲಿ ಜಯ್ ಶಾ ಕಂಪನಿ ವಹಿವಾಟು ಹದಿನಾರು ಪಟ್ಟು ಹೆಚ್ಚಳವಾಗಿರುವುದೇ ಅಕ್ರಮ ಹಣ ಗಳಿಕೆಗೆ ಸಾಕ್ಷಿಯಾಗಿದೆ. ಪ್ರಚಾರದಿಂದಲೇ ಜನಪ್ರಿಯರಾಗಿರುವ ಪ್ರಧಾನಿ ಮೋದಿರವರು ಮೊದಲು ಅವರ ಪಕ್ಷದಲ್ಲಿರುವ ಭ್ರಷ್ಟರನ್ನು ಮಟ್ಟ ಹಾಕಿ ನಂತರ ಬೇರೆಯವರ ತಪ್ಪುಗಳನ್ನು ಹುಡುಕಲಿ ಎಂದು ಪ್ರತಿಭಟನಾಕಾರರು ದೂರಿದರು.
ಮೋದಿ ಅವರ ಆಡಳಿತದಲ್ಲಿ ದೇಶದ ಉದ್ಯಮಿಗಳು, ಶ್ರೀಮಂತರು ಮತ್ತು ಬಿಜೆಪಿ ನಾಯಕರಿಗೆ ಅಚ್ಚೇದಿನ್ ಬಂದಿದೆ. ಬಡವರ ಬದುಕು ಮೂರಾಬಟ್ಟೆಯಾಗಿದೆ ಎಂದು ಆರೋಪಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಆರಂಭಿಸಿದ ಕಂಪನಿ ಆದಾಯ ಗಳಿಕೆ ಬಗ್ಗೆ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಉತ್ತರ ನೀಡಬೇಕು ಅಲ್ಲದೆ ಅಮಿತ್ ಶಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಯುವ ಕಾಂಗ್ರೆಸ್ ನಾಯಕರಾದ ಸುಹೇಲ್ ಕಂದಕ್, ಉಮೇಶ್, ಕಾಂಗ್ರೆಸ್ ನಾಯಕರಾದ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಅಜೀಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿ’ಸೋಜಾ, ಪುರಸಭಾಧ್ಯಕ್ಷೆ ಸೌಮ್ಯ, ತಾಪಂ ಸದಸ್ಯೆ ಗೀತಾ ವಾಗ್ಳೆ, ದೀಪಕ್ ಕುಮಾರ್ ಎರ್ಮಾಳ್, ನವೀನ್ಚಂದ್ರ ಶೆಟ್ಟಿ, ಕಿರಣ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.