Home Mangalorean News Kannada News ಜರ್ನಲಿಸ್ಟ್ ಯೂನಿಯನ್ ವತಿಯಿಂದ ಟ್ರೆಕ್ ಸೆಂಚುರಿ ಚಾಲೆಂಜ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಯಿಸಿದ ಜೊಸೇಫ್ ಪಿರೇರಾ ಗೆ...

ಜರ್ನಲಿಸ್ಟ್ ಯೂನಿಯನ್ ವತಿಯಿಂದ ಟ್ರೆಕ್ ಸೆಂಚುರಿ ಚಾಲೆಂಜ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಯಿಸಿದ ಜೊಸೇಫ್ ಪಿರೇರಾ ಗೆ ಸನ್ಮಾನ

Spread the love

ಜರ್ನಲಿಸ್ಟ್ ಯೂನಿಯನ್ ವತಿಯಿಂದ ಟ್ರೆಕ್ ಸೆಂಚುರಿ ಚಾಲೆಂಜ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಯಿಸಿದ ಜೊಸೇಫ್ ಪಿರೇರಾ ಗೆ ಸನ್ಮಾನ

ಮಂಗಳೂರು: ಟ್ರೆಕ್ ಸೆಂಚುರಿ ಚಾಲೆಂಜ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಯಿಸಿ , ಸ್ಪರ್ಧೆಯ ಎಲ್ಲಾ ನಾಲ್ಕು ಹಂತಗಳಲ್ಲೂ ಗೆದ್ದ ದೇಶದ ಪ್ರಥಮ ಸವಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಂಗಳೂರು ಬೈಸಿಕಲ್ ಕ್ಲಬ್ ಸದಸ್ಯ ಹಾಗೂ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಸದಸ್ಯರಾಗಿರುವ ಮಂಗಳೂರಿಯನ್ ಡಾಟ್ ಕಾಂ ಪ್ರಮುಖ ಜೋಸೆಫ್ ಪಿರೇರಾರನ್ನು ಅ.20 ರಂದು ನಡೆದ ದ.ಕ.ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಸಭೆಯಲ್ಲಿ ಅಭಿನಂದಿಸಿ ಸತ್ಕರಿಸಲಾಯಿತು.

ಜೋಸೆಫ್ ಪಿರೇರಾ ರವರು ತಮ್ಮವಯಸ್ಸನ್ನು ಲೆಕ್ಕಿಸದೆ ಮಂಗಳೂರಿನಿಂದ ಅಂಕೋಲದ ವರೆಗೆ ಮತ್ತು ಅಲ್ಲಿಂದ ಮಂಗಳೂರು ವರೆಗೆ 500 ಕಿ.ಮೀ. ದೂರವನ್ನು 30 ಗಂಟೆಗಳಲ್ಲಿ ಕ್ರಮಿಸಿ ತಮ್ಮ ಮನೋಬಲ ಪ್ರದರ್ಶಿಸಿದ್ದಾರಲ್ಲದೆ ವೈಯಕ್ತಿಕ ಸಾಧನೆ ಮಾಡಿದ್ದಾರೆ. ಇದು ಸಾಧನೆಯ ಹಂಬಲವುಳ್ಳವರಿಗೆ ಪ್ರೇರಣೆ ಎಂದು ಜರ್ನಲಿಸ್ಟ್ಸ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಹಾಗೂ ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ಕಾಪಿಕಾಡ್ ಅಭಿನಂದನಾ ಭಾಷಣದಲ್ಲಿ ಹೇಳಿದರು.

ಯೂನಿಯನ್ ನ ಪುತ್ತೂರು ಘಟಕ ರಚನೆಯಾಗಿದ್ದು ಅದನ್ನು ಸಭೆಯಲ್ಲಿ ಮಂಡಿಸಿ ಅನುಮೋದಿಸಲಾಯಿತು. ಜಿಲ್ಲೆಯಲ್ಲಿ ಜರ್ನಲಿಸ್ಟ್ಸ್ ಯೂನಿಯನ್ ಬಲಗೊಳ್ಳುತ್ತಿದ್ದು, ಇನ್ನುಳಿದ ತಾಲೂಕುಗಳಲ್ಲಿಯೂ ಘಟಕ ರಚನೆಗೊಳ್ಳಲಿದೆಯೆಂದು ಉಪಾಧ್ಯಕ್ಷ ಲಕ್ಷ್ಮಣ ಕುಂದರ್, ಖಜಾಂಚಿ ಜ್ಯೋತಿಪ್ರಕಾಶ್ ಪುಣಚ, ಸಂಘಟನಾ ಕಾರ್ಯದರ್ಶಿ ಕೆನ್ಯೂಟ್ ಪಿಂಟೊ ಹಾಗೂ ಹಮೀದ್ ವಿಟ್ಲ ಹೇಳಿದರು.

ದ.ಕ.ಜಿಲ್ಲಾಡಳಿತ ಪ್ರತಿ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದ್ದು ಈ ಬಾರಿ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡುವಾಗ ಜಿಲ್ಲೆಯ ಹಿರಿಯ ಪತ್ರಕರ್ತರಾದ ತಾರನಾಥ ಗಟ್ಟಿ ಕಾಪಿಕಾಡ್ ರವರನ್ನು ಪರಿಗಣಿಸಬೇಕೆಂದು ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಹರೀಶ್ ಬಂಟ್ವಾಳ್ ವಹಿಸಿದ್ದರು.  ವಾಯ್ಲೆಟ್ ಪಿರೇರ, ಪುತ್ತೂರು ಘಟಕದ ನೂತನ ಅಧ್ಯಕ್ಷ ಸಂತೋಷ್ ಶಾಂತಿನಗರ, ಗಣೇಶ್ ಕೆ., ಅನೀಶ್ ಕಡಬ, ರಾಮದಾಸ್ ಶೆಟ್ಟಿ, ವಿನ್ಸನ್ ಕಡಬ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version