ಜಲಪಾತದಲ್ಲಿ ಈಜಲು ತೆರಳಿದ್ದ ಆರು ಮಂದಿ ಪ್ರವಾಸಿಗರು ನೀರು ಪಾಲು
ಕಾರವಾರ: ಕರಾವಳಿ ಕರ್ನಾಟಕ ಭಾಗಕ್ಕೆ ಪ್ರವಾಸಕ್ಕೆಂದು ಬಂದಿದ್ದ ಒಂದೇ ಕುಟುಂಬದ ಐವರು ಪ್ರವಾಸಿಗರು ಜಲಪಾತದಲ್ಲಿ ಈಜುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ನೀರು ಪಾಲಾದವರನ್ನು ಫ್ರಾನ್ಸಿಲಾ ಪೀರಿಸ್ (21), ಫೀಯೋನಾ ಪಾಚಗೋ (26), ಮಸ್ರಿಲ್ಲಿನ ಮೆಕ್ಸಿಕ್ಸಾ (26), ರೇಣುಕ (23), ಸಿದ್ದು ಚೇರಿ (21) ಹಾಗೂ ಸಮೀರ ಗಾವಡೆ (23) ಎಂದು ಗುರುತಿಸಲಾಗಿದೆ. ನೀರುಪಾಲಾದವರಲ್ಲಿ ಫ್ರಾನ್ಸಿಲ್ಲಾ ಪೀರಿಸ್ ಹಾಗೂ ಫಿಯೋನಾ ಪಾಚಾಗೊ ಅವರ ಮೃತದೇಹ ಪತ್ತೆಯಾಗಿದ್ದು, ಉಳಿದವರ ಮೃತ ದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾ ಬಳಿ ನಾಗರ ಮಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಗೋವಾದ ವಾಸ್ಕೊದಿಂದ ಹಾಗೂ ಮಡ್ ಗಾಂವ್ ನಿಂದ 2 ತಂಡಗಳು ಆಗಮಿಸಿದ್ದವು. ಒಂದು ತಂಡದಲ್ಲಿ 12 ಮಂದಿಯಿದ್ದು, ಮತ್ತೊಂದು ತಂಡದಲ್ಲಿ 14 ಮಂದಿ ಪ್ರವಾಸಿಗರು ಸೇರಿ ಒಟ್ಟಿ 31 ಪ್ರವಾಸಿಗರಿದ್ದರು ಎನ್ನಲಾಗಿದೆ.
ಜಲಪಾತದ ಅಡಿ ಇರವ ಹೊಂಡದಲ್ಲಿ ಈಜಿ ಮೋಜು ಅನುಭವಿಸುವ ಹೊತ್ತಿಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾಗಿ ಕೊಚ್ಚಿ ಹೋಗಿದ್ದಾರೆ.
ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.