ಜವಾಬ್ದಾರಿಯುತ ಶಾಸಕರಿಂದ ಬೇಜವಾಬ್ದಾರಿಯುತ ಮಾತು – ವಿಕಾಸ್ ಹೆಗ್ಡೆ
ಕುಂದಾಪುರ: ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿ ಮರೆತ ಜವಾಬ್ದಾರಿಯುತ ಕುಂದಾಪುರ ಶಾಸಕರು ಬೇಜವಾಬ್ದಾರಿಯುತವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ವಿಕಾಸ್ ಹೆಗ್ಡೆ, ಜವಾಬ್ದಾರಿಯುತ ಶಾಸಕರಿಂದ ಬೇಜವಾಬ್ದಾರಿಯುತ ಮಾತು… ಶಾಸಕರ ಅಧ್ಯಕ್ಷತೆಯ ತಾಲ್ಲೂಕು ತ್ರೈಮಾಸಿಕ ಕೆ ಡಿ ಪಿ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವುದು ಕೆ ಡಿ ಪಿ ಅಧ್ಯಕ್ಷರ ಜವಾಬ್ದಾರಿ. ಆದರೆ ಕಳೆದ ಆರೇಳು ತಿಂಗಳಿಂದ ಕೆ ಡಿ ಪಿ ಸಭೆ ಕರೆಯದೆ ಇದ್ದ ಬಗ್ಗೆ ಸಮಿತಿಯ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದಾಗ ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿರವರು ಅದನ್ನು ಮೇಲಿನವರು ಕಲಿಸಿದ್ದು, ಜಿಲ್ಲಾ ಕೆ ಡಿ ಪಿ ಸಭೆ ನಡೆಯದೇ ಹಲವು ತಿಂಗಳುಗಳೇ ಕಳೆದಿದೆ ಎನ್ನುವುದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಶಾಸಕರ ಬೇಜವಾಬ್ದಾರಿಯುತ ಉತ್ತರವಾಗಿದೆ.
ಬೇರೆಯವರು ಏನೆ ಮಾಡಲಿ ಜನ ಶಾಸಕರನ್ನು ಆಯ್ಕೆ ಮಾಡಿದ್ದು ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿಗೆ, ಇದಕ್ಕೆ ಸೂಕ್ತ ವೇದಿಕೆ ಎಂದರೆ ಅದು ಕೆ ಡಿ ಪಿ ಸಭೆ, ಸಭೆ ನಡೆಯದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದಾಗ ಅದನ್ನು ಸರಿ ಪಡಿಸುವ ಭರವಸೆ ನೀಡುವುದನ್ನು ಬಿಟ್ಟು ಅಲ್ಲೂ ರಾಜಕಾರಣದ ಮಾತುಗಳನ್ನು ಆಡುವುದು ಶಾಸಕರ ಬೇಜವಾಬ್ದಾರಿಯಾಗಿದೆ. ಹಿಂದೆ ಕುಂದಾಪುರದಲ್ಲಿ ಬೇರೆ ಬೇರೆ ಪಕ್ಷದ ಹಲವು ಶಾಸಕರು ಆಗಿ ಹೋಗಿದ್ದು ಶಾಸಕರಾದ ಮೇಲೆ ರಾಜಕಾರಣ ಮಾಡಿದವರು ಇಲ್ಲಾ ಆದರೆ ಇಂದು ಕುಂದಾಪುರ ಕ್ಷೇತ್ರ ಹಲವಾರು ಸಮಸ್ಯೆಗಳಿಂದ ನಲುಗಿ ಹೋಗಿದ್ದರೂ ಸಹ ಹಾಲಿ ಶಾಸಕರು ಎಲ್ಲಾ ವಿಚಾರಗಳಲ್ಲಿ ರಾಜಕಾರಣ ಹುಡುಕುವುದು ಒಬ್ಬ ಜವಾಬ್ದಾರಿಯುತ ಶಾಸಕರ ಬೇಜವಾಬ್ದಾರಿಯುತ ನಡೆಯಾಗಿದೆ ಎಂದು ವಿಕಾಸ್ ಹೆಗ್ಡೆ ಟೀಕಿಸಿದ್ದಾರೆ.