ಜಿಲ್ಲಾಡಳಿತದ ಹಠಮಾರಿ ಧೋರಣೆಗೆ ಮರಳು ಕಾರ್ಮಿಕರು ಸಾಯುವ ಪರಿಸ್ಥಿತಿ ಬಂದಿದೆ: ರಘುಪತಿ ಭಟ್

Spread the love

ಜಿಲ್ಲಾಡಳಿತದ ಹಠಮಾರಿ ಧೋರಣೆಗೆ ಮರಳು ಕಾರ್ಮಿಕರು ಸಾಯುವ ಪರಿಸ್ಥಿತಿ ಬಂದಿದೆ: ರಘುಪತಿ ಭಟ್

ಉಡುಪಿ: ಜಿಲ್ಲಾಧಿಕಾರಿ ಕಚೇರಿ ಎದುರು ಮರಳಿಗಾಗಿ ನಡೆಯುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬಿಜೆಪಿ ನೇತೃತ್ವ ಹಾಗೂ ಸರ್ವಪಕ್ಷ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಅಹೋರಾತ್ರಿ ಧರಣಿ ನಡೆಯುತ್ತಿದೆ. ಮರಳು ಹೋರಾಟದಲ್ಲಿ ಭಾಗವಹಿಸಿದ್ದ ಮಹಮ್ಮದ್ ಹನೀಫ್ ಎಂಬವರು ಹೃದಯಾಘಾತದಿಂದ ಕಳೆದ ರಾತ್ರಿ ಅಸು ನೀಗಿದ್ದು, ಸರ್ಕಾರ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನಿಡುವಂತೆ ಶಾಸಕ ಭಟ್ ಆಗ್ರಹಿಸಿದ್ದಾರೆ.

ಮರಳು ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲರಿಗೂ ಮರಳು ತೆಗೆಯಲು ಅನುಮತಿ ನೀಡುವುದಿಲ್ಲ ಎನ್ನುವ ಜಿಲ್ಲಾಡಳಿತದ ಹಠಮಾರಿ ಧೋರಣೆಗೆ ಧರಣಿಯಲ್ಲಿ ಭಾಗವಹಿಸಿದ್ದ ಒಬ್ಬರು ಬಲಿಯಾಗಿದ್ದಾರೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ದಿನ ನಮ್ಮೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೆಜಮಾಡಿಯ ಮಹಮ್ಮದ್ ಹನೀಫ್ ಎಂಬ ಮರಳು ಕಾರ್ಮಿಕರೋರ್ವರು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ ಮರಳು ಪರವಾನಿಗೆ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿರುವುದನ್ನು ತಿಳಿದು ಆತಂಕದಿಂದ ಹೃದಯಾಘಾತಕ್ಕೀಡಾಗಿದ್ದಾರೆ. ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಧರಣಿಯಲ್ಲಿ ಭಾಗವಹಿಸಿದ್ದರು.

ಹೊಯ್ಗೆ ದೋಣಿಗಾಗಿ 6 ಲಕ್ಷ ರೂ. ಸಾಲ ಮಾಡಿದ್ದು, ಸರಿಯಾಗಿ ಮರಳು ತೆಗೆಯಲಾಗದೇ ಆರ್ಥಿಕ ಸಂಕಷ್ಟಕ್ಕೀಡಾಗಿರುವುದಾಗಿ ಹೇಳುತ್ತಿದ್ದರು. ಅದೇ ಆಘಾತದಿಂದ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಮೊದಲು ಅಜ್ಜರಕಾಡು ಸರ್ಕಾರಿ ಆಸ್ಪತ್ರೆ, ನಂತರ ಮಣಿಪಾಲ ಕೆಎಂಸಿಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಾಸಕ ಭಟ್ ಹೇಳಿದರು.

2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಸಿಆರ್ಝಡ್ ವ್ಯಾಪ್ತಿಯಲ್ಲಿ 170 ಮಂದಿಗೆ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಅಫಿದವಿತ್ ಸಲ್ಲಿಸಿದ್ದಾರೆ. ಹಾಗಾಗಿ ಆ ಅಫಿದವಿಟ್ ಪ್ರಕಾರ 170 ಮಂದಿಗೆ ಪರವಾನಗಿ ನೀಡಿ. ನಾವು ಕಾನೂನು ಮೀರಿ ಮರಳುಗಾರಿಕೆಗೆ ಪರವಾನಿಗೆ ನೀಡುವಂತೆ ಕೇಳುತ್ತಿಲ್ಲ. ಕಾನೂನಿನ ಪರಿಮತಿಯಲ್ಲೇ ಅವಕಾಶ ಕೊಡಿ ಎನ್ನುತ್ತಿದ್ದೇವೆ. 2011ರ ಮೊದಲು ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವವರು ನೋಂದಣಿಯಾಗಿರಲಿಲ್ಲ. ಜಿಲ್ಲಾಡಳಿತ 2014ರಲ್ಲಿ ನೋಂದಣಿಗೆ ಪ್ರಕಟಣೆ ಹೊರಡಿಸಿತ್ತು. ಹೀಗಿದ್ದಾಗ ಈಗಿನ ಜಿಲ್ಲಾಧಿಕಾರಿ 2011ರ ಮೊದಲಿನವರಿಗೆ ಮಾತ್ರ ಪರವಾನಿಗೆ ಎಂದು ಹೇಗೆ ತೀರ್ಮಾನಿಸುತ್ತಾರೆ ಎಂದು ಪ್ರಶ್ನಿಸಿದರು.

ಈ ಬಾರಿ 2011ರ ಹಿಂದೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವ ಪರವಾನಿಗೆ ಹೊಂದಿದವರಿಗೆ ಮಾತ್ರ ಮರಳು ತೆಗೆಯಲು ಪರವಾನಿಗೆ ನೀಡಲಾಗುತ್ತದೆ ಎನ್ನುವ ಜಿಲ್ಲಾಧಿಕಾರಿ ಪ್ರಿಯಾಂಕ, ಕಳೆದ ವರ್ಷ 170 ಮಂದಿಗೆ ಹೇಗೆ ಅನುಮತಿ ಕೊಟ್ಟಿದ್ದರು? ಕಳೆದ ವರ್ಷ ಪರವಾನಿಗೆ ಕೊಡುವಾಗ ಈ ಕಾನೂನು ಇರಲಿಲ್ಲವೇ ಎಂದು ಪ್ರಶ್ನಿಸಿದ ಭಟ್, ಜಿಲ್ಲಾಧಿಕಾರಿ 2011ರ ಮೊದಲು ಮರಳು ತೆಗೆಯುತ್ತಿದ್ದ 68 ಮಂದಿಗೆ ಮಾತ್ರ ಪರವಾನಿಗೆ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ, ಎಲ್ಲ 170 ಮಂದಿಗೆ ಪರವಾನಿಗೆ ನೀಡದೇ ನಾವು ಧರಣಿಯನ್ನು ವಾಪಾಸು ಪಡೆಯುವುದಿಲ್ಲ ಎಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶ್ರೀಧರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಗೋಪಾಲ ಭಟ್, ಗುರುರಾಜ ಭಟ್, ಸತೀಶ್ ಮುಟ್ಲುಪಾಡಿ, ಅನ್ಸಾರ್ ಅಹ್ಮದ್, ಪಟ್ಲ ಅಣ್ಣಯ್ಯ ನಾಯಕ್, ನಾಗೇಂದ್ರ ಮೊದಲಾದವರಿದ್ದರು.


Spread the love