ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಚಾಲೇಂಜ್ ಫಂಡ್ ಸಭೆ
ಉಡುಪಿ: ಸರ್ಕಾರವು ಸೃಜನಾತ್ಮಕವಾದ ಹಾಗೂ ಪರಿಣಾಮಕಾರಿಯಾದ ಯೋಜನೆಗಳನ್ನು , ಸರ್ಕಾರದ ಇಲಾಖೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಜಾರಿಗೆ ತರಲು ಚಾಲೆಂಜ್ ಫಂಡ್ ಯೋಜನೆ ಜಾರಿಗೆ ತಂದಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ , ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ಪರಿಸರ ಸ್ನೇಹಿಯಾಗಿರುವ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಹಾಗೂ ವಿನೂತನ ತಂತ್ರಜ್ಞಾನ ಹೊಂದಿರುವ ಯೋಜನೆಗಳನ್ನು, ಜಿಲ್ಲೆಯ ಶ್ರೀ ಮಾದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು, ಮಣಿಪಾಲ ತಾಂತ್ರಿಕ ಕಾಲೇಜು ಹಾಗೂ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜುಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘಟನೆಗಳು ಸಿದ್ದಪಡಿಸಿದ್ದು, ಈ ಯೋಜನೆಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ಶ್ರೀ ಮಾದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು ಸಿದ್ದಪಡಿಸಿದ್ದ, ಉಡುಪಿಯ ಬಸ್ ನಿಲ್ದಾಣಗಳ ಯೋಜನಾ ಬದ್ಧ ಅಭಿವೃದ್ಧಿ, ಡ್ರೋಣ್ ಮೂಲಕ ಕೀಟನಾಶಕ ಸಿಂಪಡಣೆ, ವಿಕಲ ಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ಅನುಕೂಲವಾಗುವಂತಹ ಯೋಜನೆಗಳು , ಮಣಿಪಾಲ ತಾಂತ್ರಿಕ ಕಾಲೇಜು ಸಿದ್ಧಪಡಿಸಿದ್ದ, ನೀರಿನ್ ಬಿಲ್ ನ ಆನ್ ಲೈನ್ ಪಾವತಿ, ಮಹಿಳಾ ಮೀನು ಮಾರಾಟಗಾರರಿಗೆ ಅನುಕೂಲವಾಗುವ , ಸೋಲಾರ್ ನಿಂದ ಕಾರ್ಯ ನಿರ್ವಹಿಸುವ ಹವಾನಿಯಂತ್ರಿತ ಮೀನು ಶೇಖರಣಾ ಪೆಟ್ಟಿಗೆ (ಕೂಲ್ ಮೀನು) ಯೋಜನೆ, ಸಂಚಾರ ವ್ಯವಸ್ಥೆಗೆ ಬಲ ನೀಡುವ ಯೋಜನೆ, ಬಳಸಿ ಉಳಿಯುವ ಆಹಾರ ಪದಾರ್ಥಗಳ ಸಮರ್ಪಕ ಹಂಚಿಕೆ ಹಾಗೂ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು ರೂಪಿಸಿದ್ದ, ಶೌಚಾಲಯಗಳಲ್ಲಿ ಬಯೋ ಟಾಯ್ಲೆಟ್ ವ್ಯವಸ್ಥೆ, ಬಯೋ ಗ್ಯಾಸ್ ಘಟಕ, ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಬಹುದಾದ ರಸ್ತೆಗಳು ಕುರಿತು ಯೋಜನೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಇಲ್ಲಿ ಸಲ್ಲಿಸಿರುವ ಯೋಜನೆಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗುವುದು, ಸರ್ಕಾರದಿಂದ ಅನುಮೋದನೆ ನೀಡುವ ಯೋಜನೆಗಳನ್ನು ಜಿಲ್ಲೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹಾಗೂ ವಿವಿಧ ಕಾಲೇಜುಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು