ಜಿಲ್ಲಾಧಿಕಾರಿ ಭೇಟಿಯಿಂದ ಆಶಾದಾಯಕ ಬೆಳವಣಿಗೆ- ಶಾಸಕ ಕಾಮತ್

Spread the love

ಜಿಲ್ಲಾಧಿಕಾರಿ ಭೇಟಿಯಿಂದ ಆಶಾದಾಯಕ ಬೆಳವಣಿಗೆ- ಶಾಸಕ ಕಾಮತ್

ಮಂಗಳೂರು: ಎಎಂಆರ್ ಡ್ಯಾಂನಿಂದ ತುಂಬೆ ಅಣೆಕಟ್ಟಿಗೆ ನೀರು ಹರಿಸಲು ಜಿಲ್ಲಾಧಿಕಾರಿಯವರು ಸಮ್ಮತಿಸಿದ್ದು, ಇದರಿಂದ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ತುಂಬೆಯ ನೀರಿನ ಮಟ್ಟವನ್ನು ಗಮನದಲ್ಲಿಟ್ಟು ರೇಶನಿಂಗ್ ವ್ಯವಸ್ಥೆಯನ್ನು ಕೈಬಿಡುವ ಬಗ್ಗೆ ಚಿಂತಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದು ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತಿದ್ದರು. ತುಂಬೆಯಲ್ಲಿ ಪಂಪಿಂಗ್ ಅನ್ನು 48 ಗಂಟೆ ನಿಲ್ಲಿಸಿದರೆ ನಂತರ ನೀರು ಮಂಗಳೂರಿನ ಎತ್ತರದ ವಲಯಗಳಿಗೆ ಮತ್ತು ಅನೇಕ ಆಯಕಟ್ಟಿನ ಜಾಗಗಳಿಗೆ ತಲುಪಲು ನಾಲ್ಕು ದಿನಗಳು ಬೇಕು. ಇದರಿಂದ ಜನಸಾಮಾನ್ಯರಿಗೆ ಅನಗತ್ಯವಾದ ತೊಂದರೆ ಆಗುತ್ತದೆ. ರೇಶನಿಂಗ್ ವ್ಯವಸ್ಥೆಯ ಮೂಲಕ ನೀರು ಅನೇಕ ವಾರ್ಡುಗಳಿಗೆ ತಲುಪುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ನೀರು ಪಂಪ್ ಆಗುತ್ತಿದ್ದು, ನಾಳೆಯಿಂದ ಎರಡು ದಿನ ಪಂಪಿಂಗ್ ನಿಲ್ಲಲಿದೆ. ಆದರೆ ಅನೇಕ ಏರಿಯಾಗಳಲ್ಲಿ ನೀರು ಬರದೇ ಈಗಾಗಲೇ ಎರಡ್ಮೂರು ದಿನಗಳಾಗಿವೆ. ನಾಳೆಯಿಂದ ಪಂಪಿಂಗ್ ನಿಲ್ಲಿಸಿದರೆ ಜನ ತೊಂದರೆಗೆ ಸಿಲುಕುತ್ತಾರೆ ಎಂದು ಶಾಸಕ ಕಾಮತ್ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಈಗಾಗಲೇ ಜನರು ನೀರಿನ ಸಮಸ್ಯೆಯ ಬಗ್ಗೆ ನಿತ್ಯ ಕರೆ ಮಾಡುತ್ತಿದ್ದು, ಪಾಲಿಕೆಯ ನೀರಿನ ವಿಭಾಗದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಸಮಸ್ಯೆ ಇರುವ ಕಡೆ ತೆರಳಿ ಅದನ್ನು ಪರಿಶೀಲಿಸಬೇಕಾಗಿದೆ. ಇಂತಹ ಸಮಯದಲ್ಲಿ ರೇಶನಿಂಗ್ ಮಾಡದೇ ಇರುವುದು ಸೂಕ್ತ ಎಂದು ಶಾಸಕ ಕಾಮತ್ ಸಲಹೆ ನೀಡಿದರು.

ರಾಜಕಾಲುವೆ ಹೂಳೆತ್ತಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಕೆಲವು ಭಾಗಗಳಲ್ಲಿ ಮಾತ್ರ ಹೂಳೆತ್ತಲಾಗುತ್ತಿದೆ. ಅದರ ಬದಲು ಸಂಪೂರ್ಣ ರಾಜಕಾಲುವೆಯ ಹೂಳು ತೆಗೆದರೆ ಕೃತಕ ನೆರೆ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಶಾಸಕ ಕಾಮತ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು. ಒಂದು ಮೀಟರ್ ಅಗಲದ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ನಡೆಸುವ ಹೊಣೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ಅವರದ್ದಾಗಿದ್ದು, ಉತ್ತರ ಕರ್ನಾಟಕದ ಸಿಬ್ಬಂದಿಗಳು ಮತದಾನಕ್ಕೆ ತೆರಳಿದ ಕಾರಣದಿಂದ ಕೆಲಸ ನಿಂತಿದೆ ಎಂದು ಸಬೂಬು ನೀಡುತ್ತಿರುವುದು ಸರಿಯಲ್ಲ ಎಂದು ಶಾಸಕ ಕಾಮತ್ ಹೇಳಿದರು. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ರಿಪೇರಿ ನಡೆಸುವಾಗ ಪಂಪ್ವೆಲ್ ಬಳಿ ಅನೇಕ ಚರಂಡಿಗಳನ್ನು ಮುಚ್ಚಿರುವುದರಿಂದ ಮಳೆಗಾಲದಲ್ಲಿ ಕೃತಕ ನೆರೆಯ ಸಂಭವ ಇದೆ. ಅದನ್ನು ಸರಿಪಡಿಸಲು ಶಾಸಕ ಕಾಮತ್ ಮನವಿ ಮಾಡಿದ್ದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಭೇಟಿಯಿಂದ ಆಶಾದಾಯಕ ಬೆಳವಣಿಗೆ ಆಗಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ಜನರಿಗೆ ಆಗಲಿದೆ ಎಂದು ಶಾಸಕ ಕಾಮತ್ ತಿಳಿಸಿದರು.

ಮಂಗಳೂರು ನಗರ ಉತ್ತರ ಶಾಸಕ ಡಾ| ಭರತ್ ಶೆಟ್ಟಿ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮನಪಾ ಮಾಜಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ ಬಂಗೇರ, ವಿಜಯ ಕುಮಾರ್ ಶೆಟ್ಟಿ, ಸುರೇಂದ್ರ, ರಾಜೇಂದ್ರ, ಮೀರಾ ಕರ್ಕೇರಾ, ಪೂರ್ಣಿಮಾ, ರಾಜೇಶ್, ನವೀನ್ ಚಂದ್ರ, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ರವಿಶಂಕರ್ ಮಿಜಾರ್ ಸಹಿತ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.


Spread the love