ಜಿಲ್ಲಾಧಿಕಾರಿ ಹಲ್ಲೆ ಪ್ರಕರಣ ಸಂಸದೆ ಶೋಭಾ ನಾಪತ್ತೆ; ಜಿಲ್ಲಾ ಕಾಂಗ್ರೆಸ್ ಪ್ರಶ್ನೆ
ಉಡುಪಿ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಹಾಯಕ ಕಮೀಷನರ್ ಅವರ ಮೇಲೆ ನಡೆದ ಹಲ್ಲೆ ಮತ್ತು ಕೊಲೆಯತ್ನಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಗೆ ಆಗಮಿಸಿಲ್ಲ ಮತ್ತು ಪ್ರಕರಣದ ಕುರಿತು ಸಭೆ ನಡೆಸಿಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿಗೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಅಂತಹ ಕೆಲಸವನ್ನು ಮಾಡಿಲ್ಲ. ಸಂಸದರು ಕೂಡ ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆಯೇ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವರು ಉಪಚುನಾವಣೆಯಲ್ಲಿ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಹೋದ ಜಿಲ್ಲಾಧಿಕಾರಿ ಹಾಗೂ ಸಹಾಯಕ ಕಮೀಷನರ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಚಿವರು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲದೆ ಹಲ್ಲೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿರುತ್ತಾರೆ. ಜಿಲ್ಲೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೆ ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಹಾಗೂ ನಿಷ್ಪಕ್ಷಪಾತ ಕರ್ತವ್ಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿಯವರೇ ಸ್ಪಷ್ಟನೆ ನೀಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಉಡುಪಿಯ ಮಾಜಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ದೂಷಿಸುವ ಬದಲು ನಾಪತ್ತೆಯಾಗಿರುವ ಶೋಭಾ ಕರಂದ್ಲಾಜೆ ಅವರನ್ನು ಕರೆಯಿಸಿ ಅವರ ಜವಾಬ್ದಾರಿಯನ್ನು ನೆನಪಿಸಿಕೊಡಬೇಕು ಎಂದು ಸಲಹೆ ಮಾಡಿದೆ.