ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಿ : ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ
ಮಂಗಳೂರು : ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ. ಸೂಚಿಸಿದರು.
ಗುರುವಾರ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರ ಕೊಠಡಿಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಡರೋಗಿಗಳು ಹೆಚ್ಚಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಬಂದಂತಹ ರೋಗಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಜೊತೆಗೆ ರೋಗಿಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳುವುದರೊಂದಿಗೆ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗುತ್ತಾರೆ ಎಂದರು.
ವೈದ್ಯಕೀಯ ನೆರವನ್ನು ಕೋರಿ ಬಂದಂತಹ ರೋಗಿಗಳಿಗೆ ಆಸ್ಪತ್ರೆಗಳಲ್ಲಿಯೇ ಉಚಿತ ಔಷóಧಿಗಳು ಸಿಗುವಂತೆ ನೋಡಿಕೊಳ್ಳಬೇಕು. ಹೊರಗಡೆ ಔಷಧಿಗಳನ್ನು ಪಡೆಯಲು ಚೀಟಿಯನ್ನು ನೀಡಬಾರದು ಅವರಿಗೆ ಕಾಲಕಾಲಕ್ಕೆ ಅಗತ್ಯ ಇರುವ ಔಷಧಿಗಳ ದಾಸ್ತಾನುಗಳು ಆಸ್ಪತ್ರೆಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅಭಿಯಾನದಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಂದ ಅಭಿಪ್ರಾಯಗಳನ್ನು ಪಡೆದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾ ಆಸ್ಪತ್ರೆಗಳನ್ನು ಬೆಂಕಿ ಅವಘಡಗಳಿಂದ ತಪ್ಪಿಸಲು ಅಗತ್ಯ ಇರುವ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು.ಪ್ರತೀ 6 ತಿಂಗಳಿಗೊಮ್ಮೆ ಅಗ್ನಿಶಾಮಕದಳದ ಸೇಪ್ಟಿ ಅಧಿಕಾರಿಯಿಂದ ಫೈರ್ ಸೇಫ್ಟಿಯ ಬಗ್ಗೆ ತಪಾಸಣೆ ನಡೆಸಿ ಅವರು ನೀಡುವ ವರದಿಯನ್ನು ಆಧಾರಿಸಿ ಫೈರ್ ಸೇಫ್ಟಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಆಸ್ಪತ್ರೆಗೆ ತುರ್ತಾಗಿ ಅವಶ್ಯವಿರುವ ಪರಿಕರಗಳು ಮತ್ತು ಔಷಧಿಗಳನ್ನು ಖರೀದಿಸುವಾಗ ಸರ್ಕಾರದ ನಿಯಮಾನುಸಾರ ಸರ್ಕಾರದ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಖರೀದಿ ಮಾಡಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಆಸ್ಪತ್ರೆಯ ಪ್ರತೀ ವರ್ಷದ ಆದಾಯವನ್ನು ಕ್ರೋಡೀಕರಿಸುವುದರೊಂದಿಗೆ ಆಸ್ಪತ್ರೆಗೆ ಅಗತ್ಯವಿರುವ ಬಜೆಟ್ ಅನ್ನು ತಯಾರಿಸುವುದರೊಂದಿಗೆ ಹೆಚ್ಚುವರಿ ಹಣವನ್ನು ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕೆಂದು ಸೂಚನೆ ನೀಡಿದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಪ್ರತ್ಯೇಕ ಸಭೆಯನ್ನು ಮುಂದಿನ ದಿನಗಳಲ್ಲಿ ಕರೆಯುವುದರೊಂದಿಗೆ ಚರ್ಚಿಸಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವಂತೆ ಸೂಚನೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇ.ಎಸ್.ಐ., ಪ್ರಾವಿಡೆಂಟ್ ಫಂಡ್ ಒಳಗೊಂಡಂತೆ ಟೆಂಡರ್ನಲ್ಲಿ ನಿಗದಿಪಡಿಸಿರುವ ವೇತನವನ್ನು ತಲುಪುವಂತೆ ನೋಡಿಕೊಳ್ಳಬೇಕು.
ಕೆಲವು ಅರ್ಹ ಬಡತನ ರೇಖೆಗಳಗಿಂತ ಕೆಳಗಿರುವವರು ಚಿಕಿತ್ಸೆಗಾಗಿ ಬಂದಂತಹ ಸಂಧರ್ಭದಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಅವರ ನೆರವಿಗೆ ಸಮಾಲೋಚಕರನ್ನು ನೇಮಿಸಿಕೊಳ್ಳಬೇಕು.
ಸಭೆಯಲ್ಲಿ ಡಿ.ಹೆಚ್.ಓ. ಡಾ. ರಾಮಚಂದ್ರ ಬಾಯರಿ, ಲೇಡಿಗೋಶನ್ ಪ್ರಭಾರ ಅಧೀಕ್ಷಕಿ ದುರ್ಗಾಪ್ರಸಾದ್, ಕೆ.ಎಮ್.ಸಿ.ಡೀನ್ ಎಮ್. ವಿ.ಪ್ರಭು, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕರು ಡಾ. ಸದಾಶಿವ ಮತ್ತಿತರರು ಉಪಸ್ಥಿರಿದ್ದರು.