Home Mangalorean News Kannada News ಜಿಲ್ಲಾ ಕರಾವಳಿ ಉತ್ಸವ ಬೃಹತ್ ಸಾಂಸ್ಕೃತಿಕ ಮೆರವಣಿಗೆ-ದಿಬ್ಬಣ 

ಜಿಲ್ಲಾ ಕರಾವಳಿ ಉತ್ಸವ ಬೃಹತ್ ಸಾಂಸ್ಕೃತಿಕ ಮೆರವಣಿಗೆ-ದಿಬ್ಬಣ 

Spread the love

ಜಿಲ್ಲಾ ಕರಾವಳಿ ಉತ್ಸವ ಬೃಹತ್ ಸಾಂಸ್ಕೃತಿಕ ಮೆರವಣಿಗೆ-ದಿಬ್ಬಣ 

ಮಂಗಳೂರು : ಜಿಲ್ಲಾ ಕರಾವಳಿ ಉತ್ಸವದ ಪ್ರಯುಕ್ತ ಜನವರಿ 10 ರಂದು ಮಧ್ಯಾಹ್ನ 3.30ಕ್ಕೆ ಮಂಗಳೂರು ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಬೃಹತ್ ಸಾಂಸ್ಕೃತಿಕ ಮೆರವಣಿಗೆ ಸಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸಿ ಮೆರವಣಿಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹತ್ತು ದಿನಗಳ ಕಾಲ ಅತ್ಯಂತ ವ್ಯವಸ್ಥಿತವಾಗಿ ನಡೆಯುವ ಹಬ್ಬವು ತುಳುನಾಡಿನ ಇತಿಹಾಸ, ಕಲೆ ಸಂಪ್ರದಾಯಗಳನ್ನು ಇಡೀ ಪ್ರಪಂಚಕ್ಕೆ ಸಾರುವ ಕಾರ್ಯವಾಗಬೇಕು. ಅದ್ಭುತ ಕರಾವಳಿ ಉತ್ಸವದಲ್ಲಿ ರಾಜ್ಯದ ಮೂಲೆಗಳಿಂದ ಆಗಮಿಸಿದ ಕಲಾ ತಂಡಗಳಿಗೆ ಶುಭಕೋರಿ, ಅತ್ಯಂತ ಶಿಸ್ತಿನಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಅಪರಾಹ್ನ 3.30ಕ್ಕೆ ಮಂಗಳೂರು ನೆಹರೂ ಮೈದಾನದಿಂದ ಹೊರಟ ಮೆರವಣಿಗೆಯು ಎ.ಬಿ ಶೆಟ್ಟಿ ಸರ್ಕಲ್, ನೆಹರು ಮೈದಾನ ರಸ್ತೆ, ಗಡಿಯಾರ ಗೋಪುರ, ಯು.ಪಿ. ಮಲ್ಯ ರಸ್ತೆ, ಹಂಪನ್ ಕಟ್ಟೆ ವೃತ್ತ, ಕಾರ್ನಾಡ್ ಸದಾಶಿವ ರಾವ್ ರಸ್ತೆ (ಕೆ.ಎಸ್. ರಾವ್ ರೋಡ್), ಬಿಷಪ್ ಹೌಸ್, ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ ಸರ್ಕಲ್), ಪಿ.ವಿ.ಎಸ್. ಜಂಕ್ಷನ್, ಮಹಾತ್ಮಾ ಗಾಂಧಿ ರಸ್ತೆ, ಬಳ್ಳಾಲ್‍ಬಾಗ್, ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ, ಲಾಲ್‍ಭಾಗ್, ಕರಾವಳಿ ಉತ್ಸವ ಮೈದಾನದಲ್ಲಿ ಸಂಪನ್ನಗೊಂಡಿತು.

ವಿವಿಧ ದೇವಾಲಯಗಳ ಸಹಭಾಗಿತ್ವದಲ್ಲಿ ಕರಾವಳಿಯ ಸಾಂಸ್ಕೃತಿಕ ಸಂಭ್ರಮದೊಂದಿಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮೆರವಣಿಗೆಯು ಸಾಗಿ ಬಂದಿದೆ. ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು ಇತ್ಯಾದಿಗಳನ್ನೊಳಗೊಂಡಿದ್ದು ಗಿರಿ-ಸಿರಿ ಜಾನಪದ ಕಲಾ ತಂಡ(ರಿ).,ಕನ್ಯಾನ, ಬಂಟ್ವಾಳ ತಂಡದಿಂದ ಕೊರಗರ ಡೋಲು-ಕೋಲು ಕುಣಿತ, ರಮೇಶ ಕನ್ಯಾನ, ಶಿವಗಿರಿ ಹೊೈಗೆಗದ್ದೆ, ಕನ್ಯಾನ ಗ್ರಾಮ, ಬಂಟ್ವಾಳ ತಂಡದಿಂದ ಕರಡಿ-ಸಿಂಹ ನೃತ್ಯ, ರಾಮನಗರ ತಂಡದಿಂದ ಪೂಜಾ ಕುಣಿತ, ಕಾರವಾರ ತಂಡದಿಂದ ಸುಗ್ಗಿ ಕುಣಿತ, ಹಾವೇರಿ ತಂಡದಿಂದ ಬೇಡರ ಕುಣಿತ, ಚಿಕ್ಕಮಂಗಳೂರು ತಂಡದಿಂದ ಮಹಿಳಾ ವೀರಗಾಸೆ, ಮಾಗಡಿ ತಂಡದಿಂದ ನಂದಿಧ್ವಜ, ಗದಗ ತಂಡದಿಂದ ಕೋಲಾಟ, ಮೈಸೂರು ತಂಡದಿಂದ ವೀರಭದ್ರ ಕುಣಿತ, ಶಿವಮೊಗ್ಗ ತಂಡದಿಂದ ಮಹಿಳಾ ಡೊಳ್ಳು, ಚಾಮರಾಜನಗರ ತಂಡದಿಂದ ಗೊರವರ ಕುಣಿತ, ತುಮಕೂರು ತಂಡದಿಂದ ಸೋಮನ ಕುಣಿತ, ಧಾರವಾಡ ತಂಡದಿಂದ ಜಗ್ಗಲಿಗೆ, ಹಾವೇರಿ ತಂಡದಿಂದ ಪುರವಂತಿಕೆ, ಶೃತಿ ಹೆಚ್, ಸಾಗರ ಇವರಿಂದ ಹೊರಜಿಲ್ಲೆಗಳ ಕಲಾವಿದರ ಸಂಘಟನೆ, ಯಶಸ್ವಿ ಕಲಾನಿಕೇತನ ಮೊಂಟೆಪದವು, ಮಂಜನಾಡಿ ಮಂಗಳೂರು ತಂಡದಿಂದ ಕಂಸಾಳೆ ಜಾನಪದ ನೃತ್ಯ, ನಲಿಪು ಜನಪದ ಕೂಟ ಒಳಪೇಟೆ, ತೊಕ್ಕೊಟ್ಟು ತಂಡದಿಂದ ಕಂಗೀಲು ಜಾನಪದ ನೃತ್ಯ, ಬಂಟಕಲ್ಲು ಉಡುಪಿ ಜಿಲ್ಲೆ ತಂಡದಿಂದ ದುರ್ಗಾ ಮಹಿಳಾ ಚೆಂಡೆ, ಬಜಪೆ (ತೆಂಕು ಯಕ್ಷಗಾನ) ಇವರಿಂದ ಶ್ರೀ ಗುರು ವಿಜಯ ವಿಠಲ ಯಕ್ಷ ಕಲಾಕೇಂದ್ರ, ಉದ್ಘೋಷ ವಾಹನ(ಮೈಕ್ ಸೇರಿ), ಬಿಸಿರೋಡ್ ಬಂಟ್ವಾಳ ಚಿಲಿಪಿಲಿ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗ, ಬ್ಯಾಂಡ್ ಸೆಟ್, ಹಾಸ್ಯ, 20 ಬಣ್ಣದ ಕೊಡೆ, ಪಾಣೆ ಮಂಗಳೂರು ತಂಡದಿಂದ ಹಾಸ್ಯಗಾರ ಗೊಂಬೆ ತಂಡ, ಮೂಕಾಂಬಿಕಾ ಚೆಂಡೆ ಬಳಗ ಮಂಗಳೂರು, ಮಂಗಳೂರು ದೇರೆಬೈಲು ಬಳಗದಿಂದ ಯಕ್ಷಾಭಿನಯ(ಬಡಗು), ರತ್ನಾಕರ ವೈ ಜೋಗಿ ಮತ್ತು ಬಳಗದಿಂದ ತುಳು ನಾಡಿನ ಪಂಚವಾದ್ಯ ವೈವಿಧ್ಯ, ತುಳು ಮಾತೆಯ ಪ್ರದರ್ಶನ ಟ್ಯಾಬ್ಲೂ, ಸುಳ್ಯ ರಮೇಶ್ ಮತ್ತು ಬಳಗದಿಂದ ಆಟಿ ಕಳಂಜ ಪ್ರದರ್ಶನ, ಒಪ್ಪನೇ ನೃತ್ಯ, ಮೊಹಮ್ಮದ್ ಹನೀಫ್ ಉಪ್ಪಳ ಇವರ ಸಫರ್ ದಫ್ ತಂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಅನೇಕ ವಿದ್ಯಾ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಎನ್‍ಸಿಸಿ, ಸ್ಕೌಟ್ಸ್ ಗೈಡ್ಸ್ ಭಾರತ ಸೇವಾದಲ, ಇತ್ಯಾದಿ ಸಂಸ್ಥೆಗಳೂ ಪಾಲ್ಗೊಂಡಿದ್ದವು.

ವಿಶೇಷ ವ್ಯವಸ್ಥೆ : ಎಲ್ಲಾ ಮಕ್ಕಳಿಗೆ, ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ಬಂಧುಗಳಿಗೆ ಉಪ್ಪಿಟ್ಟು, ಅಪ್ಪ, ಬಾಳೆಹಣ್ಣು, ಬಾದಾಮಿ ಹಾಲು, ಲಾಡು, ಕಿತ್ತಲೆ, ಕುಡಿಯುವ ನೀರು , ಉಪಹಾರದ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಈ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶಾಸಕ ವೇದವ್ಯಾಸ ಕಾಮತ್, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರ್ ಗುರುಪ್ರಸಾದ್, ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಸಂಸದರು, ಶಾಸಕರು, ಅಧಿಕಾರಿಗಳು, ಗಣ್ಯರೆಲ್ಲರೂ ಉಪಸ್ಥಿತರಿದ್ದರು.


Spread the love

Exit mobile version