Home Mangalorean News Kannada News ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಗೋಪಾಲ್ ಭಂಡಾರಿಗೆ ಶೃದ್ಧಾಂಜಲಿ

ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಗೋಪಾಲ್ ಭಂಡಾರಿಗೆ ಶೃದ್ಧಾಂಜಲಿ

Spread the love

ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಗೋಪಾಲ್ ಭಂಡಾರಿಗೆ ಶೃದ್ಧಾಂಜಲಿ

ಉಡುಪಿ: ಜಾತಿ, ಧರ್ಮದ ವೈಷಮ್ಯವೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಜಾತ್ಯತೀತತೆಗೆ ಹೆಚ್ಚಿನ ಒತ್ತು ನೀಡಿದ್ದ ಗೋಪಾಲ ಭಂಡಾರಿ ಅವರು, ಸದಾ ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದರು. ಮಹಿಳೆಯರು, ದುರ್ಬಲರು, ದಲಿತರ ಧ್ವನಿಯಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್‌ ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಶನಿವಾರ ಬ್ರಹ್ಮಗಿರಿ ಕಾಂಗ್ರೆಸ್‌ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು.

ಕಾರ್ಕಳ ಕಾಂಗ್ರೆಸ್‌ಗೆ ನಾಯಕತ್ವ ನೀಡಿದ್ದ ಭಂಡಾರಿಯವರು, ನಿಷ್ಕಳಂಕ ವ್ಯಕ್ತಿಯಾಗಿದ್ದರು. ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಹಾಗೆಯೇ ನಮ್ಮಲ್ಲಿರುವ ಅಸೂಹೆಯನ್ನು ದೂರ ಮಾಡಿ ಶುದ್ಧ ಮನಸ್ಸಿನೊಂದಿಗೆ ಎಲ್ಲರ ಜತೆಗೆ ಬೆರೆತರೆ ನಮ್ಮ ಬದುಕು ಸುಂದರವಾಗುತ್ತದೆ ಎಂದರು.

ದೀಪ ಬೆಳಗಿಸಿ ಗೌರವ ಅರ್ಪಿಸಿದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿ, ‘ಸಜ್ಜನ ರಾಜಕಾರಣಿಯಾಗಿ ಎಲ್ಲ ವರ್ಗದವರ ಪರ ಧ್ವನಿ ಎತ್ತಿದ್ದ ಗೋಪಾಲ ಭಂಡಾರಿ ನುಡಿದಂತೆ ನಡೆದ ರಾಜಕಾರಣಿಯಾಗಿದ್ದರು. ನನ್ನ ಬದಲು ಅವರು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾಗಬೇಕಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿ ನನ್ನ ಹೆಸರನ್ನು ಸೂಚಿಸಿದರು’ ಎಂದರು.

ಕಾಂಗ್ರೆಸ್‌ ನಾಯಕಿ ಶ್ಯಾಮಲಾ ಭಂಡಾರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜರ್ನಾದನ ತೋನ್ಸೆ ನುಡಿ ನಮನ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ವರೋನಿಕಾ ಕರ್ನೆಲಿಯೋ, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮಿನ್‌ ಪಡುಕೆರೆ, ಮುಖಂಡರಾದ ನರಸಿಂಹಮೂರ್ತಿ, ರೋಶಿನಿ ಒಲಿವೇರಾ, ಡಾ. ಸುನೀತಾ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಇಗ್ನೇಶಿಯಸ್‌ ಡಿಸೋಜ, ರಿಯಾಝ್‌ ಪಳ್ಳಿ, ದಿವಾಕರ ಕುಂದರ್‌, ರಾಘವ ದೇವಾಡಿಗ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಹರೀಶ್‌ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version