ಜಿಲ್ಲಾ ಕೆಡಿಪಿ ಸಭೆಯನ್ನು ಟೀಕಿಸುವ ನೈತಿಕತೆ ಬಿಜೆಪಿ ಶಾಸಕರಿಗಿಲ್ಲ – ದೀಪಕ್ ಕೋಟ್ಯಾನ್

Spread the love

ಜಿಲ್ಲಾ ಕೆಡಿಪಿ ಸಭೆಯನ್ನು ಟೀಕಿಸುವ ನೈತಿಕತೆ ಬಿಜೆಪಿ ಶಾಸಕರಿಗಿಲ್ಲ – ದೀಪಕ್ ಕೋಟ್ಯಾನ್

  • ಸುನೀಲ್ ಕುಮಾರ್ ತಮ್ಮ ಕ್ಷೇತ್ರದ ಸಮಸ್ಯೆಗೆ ಮೊದಲು ಪರಿಹಾರ ಸೂಚಿಸಲಿ

ಉಡುಪಿ: ರಾಜ್ಯದ ಕಾಂಗ್ರೆಸ್ ಸರಕಾರವನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನು ಮತ್ತು ಜಿಲ್ಲಾ ಕೆ ಡಿ ಪಿ ಸಭೆಯನ್ನು ಟೀಕಿಸುವ ನೈತಿಕತೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಹಿತ ಜಿಲ್ಲೆಯ ಬಿಜೆಪಿ ಶಾಸಕರಿಗೆ ಇಲ್ಲ. ತಮ್ಮ ಸಚಿವ ಅವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದವರು ಕಾಂಗ್ರೆಸ್ ಸರಕಾರದ ವಿರುದ್ದ ಮಾತನಾಡಲು ಯಾವ ಅರ್ಹತೆಯೂ ಇಲ್ಲ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನೂರಾರು ಸಮಸ್ಯಗಳಿದ್ದು ಇಂದಿಗೂ ಕೂಡ ಬಿಜೆಪಿಗರ ಅವೈಜ್ಞಾನಿಕ ವ್ಯವಸ್ಥೆಗಳ ಪರಿಣಾಮ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸುನೀಲ್ ಕುಮಾರ್ ಸ್ವ ತಃ ಸಚಿವರಾಗಿದ್ದರೂ ಕೂಡ ತಮ್ಮದೇ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಟೀಕಿಸುವ ಸನಿಲ್ ಕುಮಾರ್ ಅವರೇ ನಿಮ್ಮದೆ ಕ್ಷೇತ್ರದ ಇನ್ನಾದಲ್ಲಿ ಹಾದುಹೋಗುವ 400 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಸಮಸ್ಯೆ ಕಾಲಬುಡದಲ್ಲಿದ್ದರೂ ಕೂಡ ಕನಿಷ್ಠ ಅದರ ಪರಿಹಾರ ಕಂಡುಕೊಳ್ಳುವ ಪ್ರಯತ್ನ ತಮ್ಮಿಂದ ಸಾಧ್ಯವಾಗಿಲ್ಲ. ತಾವೇ ಇಂಧನ ಸಚಿವರಾಗಿದ್ದರೂ ಕೂಡ ಜಿಲ್ಲೆಗೆ ಹಾಗೂ ತಮ್ಮದೇ ಕಾರ್ಕಳ ಕ್ಷೇತ್ರದ ಜನರಿಗೆ ತೊಂದರೆಯಾಗುತ್ತದೆ ಎಂಬ ವಿಚಾರ ತಿಳಿದಿದ್ದರೂ ಕೂಡ ಮೌನ ವಹಿಸಿ 400 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಹಾದು ಹೋಗಲು ಅವಕಾಶ ಮಾಡಿಕೊಟ್ಟಿರುವ ತಮಗೆ ಇರುವ ರೈತಪರ ಹಾಗೂ ಜನಪರ ಕಾಳಜಿ ಜಗಜ್ಝಾಹೀರಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದೂರದ ಬೆಳಗಾವಿ ಕ್ಷೇತ್ರದ ಶಾಸಕಿಯಾಗಿದ್ದು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ಇನ್ನಾ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ರೈತರ ಸಮಸ್ಯೆಯನ್ನು ಆಲಿಸಿದ್ದು ಕಾಲಬುಡದಲ್ಲಿರುವ ಶಾಸಕರಿಗೆ ಮಾತ್ರ ಸಮಸ್ಯೆ ಕಣ್ಣಿಗೆ ಕಾಣದೆ ಇರುವುದು ವಿಪರ್ಯಾಸ ಸಂಗತಿ.

ಅಕ್ರಮ ಸಕ್ರಮ ವಿಚಾರದಲ್ಲಿ ಮಾತನಾಡುವ ಶಾಸಕ ಸುನೀಲ್ ಕುಮಾರ್ ಅವರು ತಮ್ಮ ಸರಕಾರದ ಅವಧಿಯಲ್ಲಿ ಇನ್ನಾ ಗ್ರಾಮದಲ್ಲಿನ ಹತ್ತು ಮಂದಿ ಕಾಡಿನ ವಾಸಿಗಳ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದಾಗ 4 ತಿಂಗಳ ಒಳಗೆ ಅರಣ್ಯ ಸಚಿವರನ್ನು ಕರೆಸಿ ಸ್ಥಳದಲ್ಲಿಯೇ ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿದ್ದು ಮೂರು ವರ್ಷಗಳು ಕಳೆದರೂ ಕೂಡ ಅದರ ಬಗ್ಗೆ ಕನಿಷ್ಠ ಪ್ರಯತ್ನ ಕೂಡ ನಡೆಸಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ಸುನೀಲ್ ಕುಮಾರ್ ಅವರಿಗೆ ತಮ್ಮ ಕ್ಷೇತ್ರದ ಕಾಡಿನ ಜನರ ಸಮಸ್ಯೆ ಯಾಕೆ ಮರೆತು ಹೋಯಿತು? ಮಾಧ್ಯಮಗಳ ಮೈಕ್ ನೋಡಿದಕ್ಷಣ ಬಾಯಿ ಚಪಲಕ್ಕೆ ಹೇಳಿಕೆ ನೀಡುವುದನ್ನು ಬಿಟ್ಟು ನೈಜ ಅಭಿವೃದ್ಧಿಚಯ ಕುರಿತು ಮಾತನಾಡುವ ಕೆಲಸ ಮಾಡಲಿ. ಕಾಂಗ್ರೆಸ್ ಪಕ್ಷ ಎಂದೂ ಕೂಡ ಪ್ರಚಾರಕ್ಕಾಗಿ ಅಭಿವೃದ್ಧಿ ಮಾಡುವುದಿಲ್ಲ ಬದಲು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.

ಸರಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಬ್ಬರಿಗೂ ಲಭಿಸುತ್ತಿರುವುದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಇತ್ತೀಚಿನ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮಕಾಡೆ ಮಲಗಿದ್ದು ಹತಾಶ ಭಾವನೆಯಿಂದ ಬಿಜೆಪಿ ಶಾಸಕರು ಬಾಯಿಗೆ ಬಂದಂತೆ ಸುಳ್ಳುಗಳನ್ನು ಸೃಷ್ಠಿಸಿ ಜನರನ್ನು ದಾರಿ ತಪ್ಪಿಸುವ ಪ್ರತಯ್ನ ಮಾಡುತ್ತಿದ್ದು ಇದಕ್ಕೆಲ್ಲಾ ಜನರು ಸೊಪ್ಪು ಹಾಕುವುದಿಲ್ಲ ಎಂದು ದೀಪಕ್ ಕೋಟ್ಯಾನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love