Home Mangalorean News Kannada News ಜಿಲ್ಲೆಯಲ್ಲಿ ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಮಾರಾಟ-ಪ್ರದರ್ಶನ

ಜಿಲ್ಲೆಯಲ್ಲಿ ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಮಾರಾಟ-ಪ್ರದರ್ಶನ

Spread the love

ಜಿಲ್ಲೆಯಲ್ಲಿ ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಮಾರಾಟ-ಪ್ರದರ್ಶನ

ಉಡುಪಿ : ಮೈಸೂರು ಎಲ್ಲಾ ವಿಷಯಗಳಲ್ಲಿ ಬ್ರಾಂಡ್ ಆಗಿದೆ. ದೇಶದಲ್ಲಿಯೇ ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳು ತುಂಬಾ ಒಳ್ಳೆಯ ಹೆಸರು ಗಳಿಸಿದ್ದು, ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಂತ ಮೈಸೂರು ಸಿಲ್ಕ್ ವಿಭಿನ್ನವಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಮಂಗಳವಾರ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದಿಂದ ಉಡುಪಿಯ ಡಯಾನ ಹೋಟೆಲ್ನಲ್ಲಿ ಆಯೋಜಿಸಲಾದ ಕೆ.ಎಸ್.ಐ.ಸಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿ, ಮಹಾರಾಜರ ಕಾಲದಲ್ಲಿ ಮೈಸೂರನ್ನು ಬ್ರಾಂಡಿಂಗ್ ಮಾಡಲು ಒತ್ತು ನೀಡಿದ್ದು, ಇಂದಿಗೂ ಅಂತಹ ಕುರುಹು ಕಾಣಸಿಗುತ್ತದೆ. ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಮೈಸೂರು ಸಿಲ್ಕ್ ಸೀರೆಗಳನ್ನು ಉಡುಪಿಗೆ ತಂದು, ಇಲ್ಲಿ ಶೇ. 25 ರಷ್ಟು ರಿಯಾಯಿತಿ ದರದಲ್ಲಿ ನೀಡುತ್ತಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು, ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಪ್ರಧಾನ ವ್ಯವಸ್ಥಾಪಕ ಭಾನುಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ಎಸ್.ಐ.ಸಿ ಮೈಸೂರು ಸಿಲ್ಕ್ ಸೀರೆಗಳು ಸರಕಾರಿ ಸಾಮ್ಯದ ಏಕೈಕ ಸಂಸ್ಥೆಯಾಗಿದ್ದು, 100 ವರ್ಷದ ಇತಿಹಾಸವಿದೆ. ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆ ಹಾಗೂ ಪರಿಶುದ್ಧ ಚಿನ್ನದಿಂದ ಮಾಡಲ್ಪಟ್ಟಿದೆ. ಹಾಗೂ ಕೆ.ಎಸ್.ಐ.ಸಿ.ಯ ಮೈಸೂರು ಸಿಲ್ಕ್ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಾವಣಿ ಪಡೆದುಕೊಂಡಿದೆ. ಪ್ರತಿ ದಿನ 250 ಸೀರೆಗಳನ್ನು ತಯಾರಿಸಲಾಗುತ್ತಿದ್ದು, 350 ಸೀರೆಗಳ ಬೇಡಿಕೆ ಇದ್ದು, 6 ಸಾವಿರದಿಂದ 1.5 ಲಕ್ಷ ರೂ. ಗಳ ಸೀರೆಗಳು ಲಭ್ಯವಿದೆ. ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವು ಇಂದಿನಿಂದ ಡಿ. 13 ರ ವರೆಗೆ ಉಡುಪಿಯಲ್ಲಿ ನಡೆಯಲಿದ್ದು, ಈ ಬಾರಿ 200 ಕೋಟಿ ರೂ. ಗಳ ಗುರಿಯನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ, ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ನ ಸಿಬ್ಬಂದಿಗಳು, ಉಡುಪಿ ಡಯಾನ ಹೋಟೇಲ್ನ ಮಾಲೀಕ ವಿಠಲ್ ಪೈ, ಮತ್ತಿತರರು ಹಾಜರಿದ್ದರು.


Spread the love

Exit mobile version