Home Mangalorean News Kannada News ಜಿಲ್ಲೆಯಲ್ಲಿ ಪ್ರಸವ ಪೂರ್ಣ ಭ್ರೂಣ ಲಿಂಗ ಪತ್ತೆ ಪ್ರಮಾಣ ಕಡಿಮೆ: ದಿನಕರ ಬಾಬು

ಜಿಲ್ಲೆಯಲ್ಲಿ ಪ್ರಸವ ಪೂರ್ಣ ಭ್ರೂಣ ಲಿಂಗ ಪತ್ತೆ ಪ್ರಮಾಣ ಕಡಿಮೆ: ದಿನಕರ ಬಾಬು

Spread the love

ಜಿಲ್ಲೆಯಲ್ಲಿ ಪ್ರಸವ ಪೂರ್ಣ ಭ್ರೂಣ ಲಿಂಗ ಪತ್ತೆ ಪ್ರಮಾಣ ಕಡಿಮೆ: ದಿನಕರ ಬಾಬು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ರಕ್ಷಣೆ ನೀಡುತ್ತಿದ್ದು, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕುರಿತು ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿರುವ ಕಾರಣ ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಪ್ರಕರಣಗಳು ಕಡಿಮೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮೆಚ್ಚುಗೆ ವ್ಯಕ್ತ ಪಡಿಸಿದರು.

ಅವರು ಮಂಗಳವಾರ ಜಿಲ್ಲಾ ಆಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಸಕ್ಷಮ ಪ್ರಾಧಿಕಾರ ಪಿ.ಸಿ & ಪಿ.ಎನ್.ಡಿ.ಟಿ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರುತು (ಪಿ.ಸಿ & ಪಿ.ಎನ್.ಡಿ.ಟಿ) ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರೂಣ ಲಿಂಗ ಪತ್ತೆ ಬಗ್ಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವುದರಿಂದ, ಗ್ರಾಮೀಣ ಪ್ರದೇಶದ ಸೇರಿದಂತೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಾದ್ಯವಾಗಲಿದೆ ಎಂದು ದಿನಕರ ಬಾಬು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಯಿಂದ ಸಮಾಜದಲ್ಲಿ ಲಿಂಗಾನುಪಾತದ ಅಂತರ ಹೆಚ್ಚಾಗಲಿದೆ, 2011 ರಲ್ಲಿ ಭಾರತದಲ್ಲಿ 1000 ಪುರುಷರಿಗೆ 940 ಮಹಿಳಾ ಲಿಂಗಾನುಪಾತ ಇದ್ದು, ಉಡುಪಿ ಜಿಲ್ಲೆಯಲ್ಲಿ 958 ಇತ್ತು, ಕಳದ ವರ್ಷ ಜಿಲ್ಲೆಯ ಲಿಂಗಾನುಪಾತ 940 ಇದ್ದು, ಈ ವರ್ಷ 977 ಆಗಿದೆ, ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ರೆಡ್ಝೋನ್ನಲ್ಲಿ ಇಲ್ಲದಿದ್ದರೂ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು, ಯಾವುದೇ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಭ್ರೂಣಲಿಂಗ ಪತ್ತೆ ಬಗ್ಗೆ ಪ್ರಚೋದಿಸುವಂತಹ ಜಾಹಿರಾತು, ದೇವರ ಪೋಟೋ ಹಾಕಿ ಪರೋಕ್ಷವಾಗಿ ಭ್ರೂಣದ ಕುರಿತು ಮಾಹಿತಿಗಳನ್ನು ನೀಡಬಾರದು.

ಯಾವುದೇ ವೈದ್ಯರು ಪ್ರಸವ ಪೂರ್ವ ಭ್ರೂಣಲಿಂಗದ ಮಾಹಿತಿ ನೀಡಿದಲ್ಲಿ, ಮೊದಲನೇ ಭಾರಿ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಭ್ರೂಣಲಿಂಗ ಪತ್ತೆ ಮಾಡಿದರೆ 5 ವರ್ಷ ಜೈಲು ಶಿಕ್ಷೆ ಹಾಗೂ 50,000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ವೈದ್ಯಾಧಿಕಾರಿಯು ಭ್ರೂಣಲಿಂಗ ಪತ್ತೆಯನ್ನು ಮುಂದುವರಿಸಿದರೆ ಆತನ ನೊಂದಣಿಯನ್ನು ರದ್ದುಪಡಿಸಲಾಗುತ್ತದೆ ಎಂದರು.

ಜಿಲ್ಲೆಯ ಜಿಲ್ಲಾಧಿಕಾರಿಗಳು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಕ್ರಮ ಕೈಗೊಳ್ಳುವ ಸಕ್ಷಮ ಪ್ರಾಧಿಕಾರಿಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಜಿಲ್ಲಾ ತಪಾಸಣಾ ಸಮಿತಿ ಮತ್ತು ಜಿಲ್ಲಾ ಸಲಹಾ ಸಮಿತಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತದೆ ಎಂದು ಹೇಳಿದರು.

ಪ್ರಸೂತಿತಜ್ಞರು ಹಾಗೂ ಪಿ.ಸಿ & ಪಿ.ಎನ್.ಡಿ.ಟಿಯ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಡಾ.ಪ್ರತಾಪ್ ಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಬೇಡ ಎನ್ನುವವರಿಗೆ ಹೆಣ್ಣು ಮಕ್ಕಳ ಸಾಧನೆ ಬಗ್ಗೆ ಹೆಚ್ಚು ಹೆಚ್ಚು ತಿಳಿಹೇಳಿ ಜಾಗೃತಿ ಮೂಡಿಸಬೇಕು. ಹೆಣ್ಣು ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ತಿಳಿದರೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಕುರಿತ ಕರಪತ್ರ ಬಿಡುಗಡೆ ಮಾಡಿದ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ತಾಯಿಯ ಗರ್ಭದಲ್ಲಿ ಸಮಸ್ಯೆಗಳ ಬಗ್ಗೆ, ಮಗುವಿನ ಬೆಳವಣಿಗೆ ಆರೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಲು ನಡೆಸುತ್ತಿದ್ದ ಸ್ಕ್ಯಾನಿಂಗ್ ಇಂದು ಲಿಂಗ ಪತ್ತೆಗಾಗಿ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ, ಯಾವ ದೇಶದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಶಿಕ್ಷಣ ಪಡೆಯುತ್ತಾರೂ ಆ ದೇಶ ಹೆಚ್ಚು ಅಭಿವೃದ್ಧಿ ಸಾಧಿಸುತ್ತದೆ. ಹೆಣ್ಣು ಮಕ್ಕಳಿಗೆ ಯಾವುದೇ ಕೀಳರಿಮೆ ಇಲ್ಲದೆ ವಿದ್ಯಾಭ್ಯಾಸ ನೀಡಿದರೆ ಹೆಣ್ಣು ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬಂದು ಸಮಾಜದ ಏಳಿಗೆಗೆ ಕಾರಣರಾಗುತ್ತಾರೆ. ಗಂಡು ಹೆಣ್ಣಿನ ನಡುವೆ ಸಮಾನತೆ ಇದ್ದಾಗ ಮಾತ್ರ ಯಾವುದೇ ಗೊಂದಲಕ್ಕೆ ಆಸ್ಪದ ಇರುವುದಿಲ್ಲ ಇಲ್ಲವಾದಲ್ಲಿ ಸಮಾಜದಲ್ಲಿ ಕೆಟ್ಟ ವಿಚಾರಗಳು ನಡೆಯುತ್ತದೆ ಎಂದರು.

ಮಣಿಪಾಲ ಸೋನಿಯಾ ಕ್ಲೀನಿಕ್ನ ಸ್ತ್ರೀ ರೋಗತಜ್ಞೆ ಡಾ.ಶುಭಗೀತಾ ಮಾತನಾಡಿ, ಆಶಾ ಕಾರ್ಯಕರ್ತೆಯರು ಹೆಣ್ಣು ಮಕ್ಕಳ ಪ್ರಾಧ್ಯಾನ್ಯತೆಯ ಬಗ್ಗೆ ಸಾರ್ವಜನಿಕ ಜಾಗೃತಿ ನೀಡಬೇಕು. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಮನೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮಾನತೆ ಇರಬೇಕು. ಸಮಾಜದಲ್ಲಿ ಶಿಕ್ಷಿತರಿಂದಲೇ ತಪ್ಪುಗಳು ನಡೆಯುತ್ತಿದೆ. ವರದಕ್ಷಿಣೆಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ಭ್ರೂಣಲಿಂಗ ಪತ್ತೆ ಹೆಚ್ಚಾಯಿತು. ಆದ್ದರಿಂದ ವರದಕ್ಷಿಣೆ ಪದ್ದತಿಯ ಬಗ್ಗೆ ಶಿಕ್ಷಣ ನೀಡಬೇಕು. ಮಹಿಳೆಯರಿಗೆ ಗೌರವಿಸುವ ಮನೋಭಾವನೆಯಲ್ಲಿ ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಅಜ್ಜರಕಾಡುವಿನ ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಜೇಂದ್ರ ಕೆ. ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಉಡುಪಿ ತಾ.ಶಿಶು ಅಭಿವೃಧ್ದಿ ಯೋಜನಾಧಿಕಾರಿ ವೀಣಾ ಉಪಸ್ಥಿತರಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಸ್ವಾಗತಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love

Exit mobile version