ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ನಿಗ್ರಹಕ್ಕೆ ಸೂಕ್ತ ನಿರ್ದೇಶನ – ಸಚಿವ ರಮಾನಾಥ ರೈ
ಮಂಗಳೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಜಾಲ ನಿಗ್ರಹಕ್ಕೆ ಪೋಲಿಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಅವರು ನಗರದ ಸರ್ಕ್ಯೂಟ್ ಹೌಸಿನಲ್ಲಿ ಗುರುವಾರ ಪೋಲಿಸ್ ಮತ್ತು ಕಂದಾಯ ಅಧಿಕಾರಿಗಳ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ವ್ಯಾಪಕವಾಗಿದ್ದು ಇದುವೆ ಝುಬೈರ್ ಕೋಲೆಗೆ ಕಾರಣವಾಗಿದೆ ಎಂದು ಲೋಕಸಭಾ ಸದಸ್ಯರು ಹೇಳಿದ್ದರು. ಆದರೆ ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ವ್ಯಾಪಕವಾಗಿದೆ ಆದರೆ ವಿರೋಧ ಪಕ್ಷಗಳು ಝುಬೇರ್ ಕೊಲೆಗೆ ರಾಜಕೀಯ ಬಣ್ಣವನ್ನು ಕಟ್ಟುತ್ತಿದ್ದಾರೆ. ನಗರ ಪೋಲಿಸರು 4 ತಂಡಗಳನ್ನು ರಚಿಸುವುದರ ಮೂಲಕ ಕೊಲೆ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಅಲ್ಲದೆ ವೈಯುಕ್ತಿಕ ದ್ವೇಷಕ್ಕಾಗಿ ಕೊಲೆ ನಡೆದಿದೆ ಎನ್ನುವುದು ತಿಳಿದುಬಂದಿದೆ.
ಜಿಲ್ಲೆಯ ಔಷಧಿ ಅಂಗಡಿಗಳಿಗೆ ಕೂಡ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದ್ದು, ಯಾವುದೇ ವೈದ್ಯರ ಚೀಟಿ ಇಲ್ಲದೆ ಔಷದಿಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ. ನಗರ ಪೋಲಿಸ್ ಆಯುಕ್ತರು ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದ್ದು, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕುರಿತು ಸೂಚನೆ ನೀಡಲಾಗಿದೆ. ಮಾದಕ ದ್ರವ್ಯ ಜಾಲ ತಡೆಗೆ ಎಲ್ಲಾ ರಾಜಕೀಯ ಪಕ್ಷಗಳೂ ಕೂಡ ಕೈಜೋಡಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಪೋಲಿಸ್ ಕಮೀಷನರ್ ಟಿ.ಆರ್.ಸುರೇಶ್, ಎಸ್ಪಿ ಸುಧಿರ್ ಕುಮಾರ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.