ಜಿಲ್ಲೆಯ ಆದ್ಯತೆಗಳನ್ನು ಗಮನದಲ್ಲಿರಿಸಿ ಪರಿಹರಿಸಲು ಕ್ರಮ: ಸೊರಕೆ

Spread the love

ಉಡುಪಿ : ಜಿಲ್ಲೆಯ ಜನರು ಅದರಲ್ಲೂ ಮುಖ್ಯವಾಗಿ ರೈತರು ಎದುರಿಸುತ್ತಿರುವ ನೀರು, ಡೀಮ್ಡ್ ಅರಣ್ಯ, ಕುಮ್ಕಿ ಹಕ್ಕು, ಮರಳು, 94ಸಿಸಿಯಂತಹ, ಜನರಿಗೆ ಮನೆ ನಿವೇಶನ ಒದಗಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.

image005sorake-public-meet-kundapur-20160502

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಮಾರ್ಗದರ್ಶನದಂತೆ ಜನಪರವಾಗಿ ಜಿಲ್ಲಾಡಳಿತ ಚಿಂತಿಸಿ ಯೋಜನೆ ಅನುಷ್ಠಾನಕ್ಕೆ ತನ್ನಿ ಎಂದ ಸಚಿವರು, ಜಿಲ್ಲೆಯ ಜನರಿಗೆ ಆದ್ಯತೆಯ ಮೇಲೆ ಮರಳು ಒದಗಿಸುವ ಬಗ್ಗೆ , 94 ಸಿಸಿಯಡಿ ನಿವೇಶನಕ್ಕೆ ಅರ್ಜಿ ಸ್ವೀಕಾರಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ನುಡಿದರು.
ಅರ್ಹ ಫಲಾನುಭವಿಗಳಿಗೆ ಭೂಮಿ ಹಕ್ಕು ಹಾಗೂ ನಿವೇಶನ ನೀಡಲು ಕೈಗೊಂಡ ಕ್ರಮಗಳನ್ನು ವಿವರಿಸಿದ ಸಚಿವರು, ಇನ್ನೂ ಜನಪರವಾಗಿ ಯೋಜನೆ ಅನುಷ್ಠಾನಕ್ಕೆ ತರುವಂತೆ ಅಗತ್ಯ ನೀತಿಗಳನ್ನು ರೂಪಿಸಲು ಸಚಿವ ಸಂಪುಟ ಸಭೆಯಲ್ಲಿ ಪ್ರತಿಪಾದಿಸಲಾಗುವುದು ಎಂದು ತಿಳಿಸಿದರು.
ವಾರಾಹಿ ನೀರಾವರಿ ಸಮಸ್ಯೆ ಬಗ್ಗೆ ರೈತರ ಅಹವಾಲು ಆಲಿಸಿದ ಸಚಿವರು, ಸಮಸ್ಯೆ ಬಗೆಹರಿಸಲು ಶೀಘ್ರವೇ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವ ನಿರ್ಧಾರವನ್ನು ಸಭೆಯಲ್ಲಿ ಸಚಿವರು ಪ್ರಕಟಿಸಿದರು. ಜನರ ಸಮಸ್ಯೆಗಳನ್ನು ಪರಿಹರಿಸಲು ಹಂತಹಂತವಾಗಿ ಪರಿಹರಿಸಲು, ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಜನಪರ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹಾಗೂ ಜಿಲ್ಲೆಯ ಜನತೆ ಹಿತವನ್ನು ಗಮನದಲ್ಲಿರಿಸಿ ಇಲ್ಲಿನ ಜನಾಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಹಕ್ಕುಪತ್ರ ನೀಡುವಲ್ಲಿ ಅರ್ಹರಿಗೆ ಆದ್ಯತೆ ಮೇಲೆ ಕ್ರಮಕೈಗೊಳ್ಳಿ ಎಂದು ತಹಸೀಲ್ದಾರರಿಗೆ ಸೂಚನೆ ನೀಡಿದ ಸಚಿವರು, ಈ ಸಂಬಂಧ ಗೊಂದಲ ಮಾಡಬೇಡಿ ಎಂದು ಅಧಿಕಾರಿಗಳಿಗೆ ಹೇಳಿದರು. ಜಿಲ್ಲೆಯ ರೈತರು ವಾರಾಹಿ, ಭೂಮಿ ಹಕ್ಕು ಹಾಗೂ ಮರಳುಗಾರಿಕೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸವಿವರವಾಗಿ ಸಚಿವರ ಮುಂದಿರಿಸಿದ ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು, ಜನರಿಗೆ ವಿಳಂಬವಿಲ್ಲದೆ ನ್ಯಾಯಕೊಡಿಸುವ ವ್ಯವಸ್ಥೆಯಾಗಬೇಕೆಂದರು.
ವಾರಾಹಿಯಲ್ಲಿ ಬಿರು ಬೇಸಿಗೆಯಲ್ಲಿ ನೀರು ನಿಲ್ಲಿಸಿರುವುದು ತಪ್ಪು; ಇದಕ್ಕೆ ಪರಿಹಾರ ನೀಡಬೇಕು ವಾರಾಹಿ ಯೋಜನೆಯ ಮೂಲ ಉದ್ದೇಶದಂತೆ ಪೂರ್ವಯೋಜಿತ ಎಲ್ಲ ಹಳ್ಳಿಗಳಿಗೆ ನೀರು ಒದಗಿಸುವ ಬಗ್ಗೆ ಕಾಮಗಾರಿಗಳು ಮುಂದುವರಿಯಬೇಕು ಎಂದು ಒತ್ತಾಯಿಸಿದರು.
ಮರಳುಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನವನ್ನು ಪಾಲಿಸುವುದಾಗಿ ಜಿಲ್ಲಾಧಿಕಾರಿ ಡಾ. ವಿಶಾಲ್ ಹೇಳಿದರು. ಪಾರದರ್ಶಕವಾಗಿ ಕಾನೂನು ಪ್ರಕಾರ ಕರ್ತವ್ಯಪಾಲನೆ ಮಾಡುತ್ತಿರುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು, ಮರಳುಗಾರಿಕೆ ಸಮಸ್ಯೆ ಪರಿಹರಿಸಲು, ಮರಳು ಶೇಖರಿಸಿಡಲು ಪಿಡಬ್ಲ್ಯುಡಿ ಗೆ ಹೊಣೆ ವಹಿಸಲಾಗಿದೆ ಎಂದರು.
ಸಿಆರ್‍ಝಡ್ ಮತ್ತು ನಾನ್ ಸಿಆರ್ ಝಡ್ ಬಗ್ಗೆ ರೈತರಿಗೆ ಜಿಲ್ಲಾಧಿಕಾರಿಗಳು ವಿವರಿಸಿದರು. ಆದರೆ ರೈತರು ಸ್ಥಳೀಯರಿಗೆ ಮರಳುಗಾರಿಕೆಯಲ್ಲಿ ಆದ್ಯತೆ, ಕಡಿಮೆ ದರ ನಿಗದಿಪಡಿಸುವಂತೆ ಕೋರಿದರು. ಜಿಲ್ಲೆಯ ಮರಳನ್ನು ಜಿಲ್ಲೆಗೆ ನೀಡಿ ಎಂಬ ಪ್ರಬಲವಾದ ಬೇಡಿಕೆ ರೈತರಿಂದ ಸಭೆಯಲ್ಲಿ ವ್ಯಕ್ತವಾಯಿತು. ಶನಿವಾರದೊಳಗಾಗಿ ಸಿಆರ್ ಝಡ್ ಮರಳುಗಾರಿಕೆಗೆ ಹೆಚ್ಚಿನ ಲೈಸನ್ಸ್ ನೀಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 275 ಎಕರೆ ಭೂಮಿಯನ್ನು ಒಂದೂವರೆ ವರ್ಷದಲ್ಲಿ ವಸತಿ ನಿವೇಶನಕ್ಕೆ ಮೀಸಲಿರಿಸಲಾಗಿದೆ ಎಂದ ಜಿಲ್ಲಾಧಿಕಾರಿಗಳು, ಉಡುಪಿಯಲ್ಲಿ 25 ಎಕರೆ, ಬ್ರಹ್ಮಾವರದಲ್ಲಿ 46 ಎಕರೆ, ಕಾರ್ಕಳದಲ್ಲಿ36, ಕುಂದಾಪುರದಲ್ಲಿ 15, ಬೈಂದೂರಿನಲ್ಲಿ 4 ಎಕರೆ ಒಟ್ಟು 126 ಎಕರೆ ಕಳೆದ ಒಂದು ವರ್ಷದಲ್ಲಿ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆ ವಿಳಂಬದಿಂದ ರೈತರಿಗೆ ಉಪಯೋಗವಾಗುತ್ತಿಲ್ಲ; ಎಡಮೊಗೆ ಪಂಚಾಯತ್ ಪಿಡಿಒ ಜನರಿಗೆ ಲಭ್ಯವಿಲ್ಲದ್ದರಿಂದ ನೀರಿನ ಸಮಸ್ಯೆ ಹೇಳಿಕೊಳ್ಳಲಾಗುತ್ತಿಲ್ಲ ಎಂದ ರೈತರಿಗೆ ಪಿಡಿಒ ಪ್ರಭಾರ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹೇಳಿದರು. ತಕ್ಷಣವೇ ಎಡಮೊಗೆ ಸಮಸ್ಯೆ ಪರಿಹರಿಸಲು ಸಚಿವರು ಇಒ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗೆ ಪೂರಕವಾಗಿ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನಕ್ಕೆ ಬೃಹತ್ ನೀರಾವರಿ ಇಲಾಖೆಗೆ ವಹಿಸಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆಂದು ಸಚಿವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್, ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಶಾಸಕರಾದ ಸುನಿಲ್ ಕುಮಾರ್ ಸಭೆಯಲ್ಲಿದ್ದರು. ರೈತರು ಅವರ ಕುಮ್ಕಿ ಹಕ್ಕು, ಮರಳಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮಂಡಿಸಿದರು. ಸ್ಥಳೀಯವಾಗಿ ತಾವೆದುರಿಸುವ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.


Spread the love