ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ಬದ್ಧ- ಶೋಭಾ ಕರಂದ್ಲಾಜೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿರುವ ಎಲ್ಲಾ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ
ಅವರು ಶುಕ್ರವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಭಾರತ ಸರ್ಕಾರದ ಸಾಮಾಜಿಕ ಮತ್ತು ಸಬಲೀಕರಣ ಸಚಿವಾಲಯ, ಅಲಿಮ್ಕೋ ಬೆಂಗಳೂರು, ಜಿಲ್ಲಾಡಳಿತ ಉಡುಪಿ .ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ, ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಬೃಹತ್ ಶಿಬಿರದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಅಂದಾಜು 10000 ಮಂದಿ ವಿಕಲಚೇತನರಿದ್ದಾರೆ ಅದರೆ ಸರಿಯಾದ ಸಮೀಕ್ಷೆ ನಡೆಯದ ಕಾರಣ ನಿಖರವಾಗಿ ಸಂಖ್ಯೆಯನ್ನು ಗುರುತಿಸಲಾಗುತ್ತಿಲ್ಲ, ಈ ಕುರಿತು ಸಮೀಕ್ಷೆ ನಡೆಸಿ ನಿಖರವಾದ ಸಂಖ್ಯೆಯನ್ನು ನೀಡಿದಲ್ಲಿ, ಕೇಂದ್ರ ಸರ್ಕಾರದ ವತಿಯಿಂದ ಎಲ್ಲರಿಗೂ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಕರಪತ್ರಗಳನ್ನು ಮುದ್ರಿಸಿ ವಿತರಣೆ, ಪೋಸ್ಟರ್ ಗಳನ್ನು ಮುದ್ರಿಸಿ ಹಂಚುವ ಮೂಲಕ ಹೆಚ್ಚಿನ ಪ್ರಚಾರ ನೀಡಿ, ಫಲಾನುಭವಿಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಂಸದರು ತಿಳಿಸಿದರು.
ಪ್ರಧಾನಮಂತ್ರಿಗಳು ತಿಳಿಸಿದಂತೆ , ಅಂಗವಿಕಲಕರು , ವಿಕಲಚೇತನರು ಎಂದು ಕರೆಯದೆ ದಿವ್ಯಾಂಗರು ಎಂದು ಕರೆಯುವಂತೆ ಹೇಳಿದ ಸಂಸದರು, ಹಲವು ಸ್ವಯಂ ಸೇವಾ ಸಂಸ್ಥೆಗಳು ದಿವ್ಯಾಂಗರಿಗೆ ಅಗತ್ಯ ನೆರವು ನೀಡುತ್ತಿದ್ದು, ದಿವ್ಯಾಂಗರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ 74, ಕುಂದಾಪುರದ 156 ಮತ್ತು ಕಾರ್ಕಳದ 91 ಸೇರಿದಂತೆ ಒಟ್ಟು 321 ವಿಕಲಚೇತನರಿಗೆ 30,72,200.00 ರೂ ಮೊತ್ತದ ವಿವಿಧ ಸಾಧನ ಸಲಕರಣೆಗಳನ್ನು ಸಂಸದರು ವಿತರಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು,ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ನಿರಂಜನ ಭಟ್, ಉಡುಪಿ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ. ಅಶೋಕ್ ಕುಮಾರ್, ಖಜಾಂಜಿ ಡಾ.ರಾಮಚಂದ್ರ ಕಾಮತ್, ಸದಸ್ಯ ಕಾರ್ಯದರ್ಶಿ ಜೆ.ಸಿ. ಜನಾರ್ಧನ್ ಉಪಸ್ಥಿತರಿದ್ದರು.
ಅಲಿಮ್ಕೋ ಸಂಸ್ಥೆಯ ಅಶೋಕ್ ಪಾಲ್ ಪ್ರಸ್ತಾವಿಕವಾಗಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಉಮೇಶ್ ಪ್ರಭು ಸ್ವಾಗತಿಸಿದರು.