ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ
ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಅಂಗವಾಗಿ, ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯು ಇಂದು (ಸೆ. 14) ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ ಗಂ. 9.30ರಿಂದ ನಡೆಯಲಿದೆ. ಮಂಗಳೂರು ತಾಲೂಕಿನಲ್ಲಿ ನೋಂದಾವಣೆ ಮಾಡಿರುವ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿರುವುದರಿಂದ ಮಂಗಳೂರು ನಗರ ಮತ್ತು ಗ್ರಾಮಾಂತರ ಎಂಬ ಎರಡು ವಿಭಾಗ ಮಾಡಲಾಗಿದ್ದು, ನಗರದ ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯದ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ.
ಬಂಟ್ವಾಳ ತಾಲೂಕಿಗೆ ಮೆಲ್ಕಾರ್‍ನಲ್ಲಿರುವ ಬಿರ್ವ ಸಭಾಂಗಣ, ಪುತ್ತೂರಿಗೆ ಸುದಾನ ಶಾಲಾ ಸಭಾಂಗಣ, ಬೆಳ್ತಂಗಡಿಗೆ ಅಂಬೇಡ್ಕರ್ ಭವನ ಹಾಗೂ ಸುಳ್ಯ ತಾಲೂಕಿನ ಸ್ಪರ್ಧೆಗೆ ಸಂತ ಜೋಸೆಫ್ ಶಾಲಾ ಸಭಾಂಗಣ ಕೇಂದ್ರವಾಗಿರುತ್ತದೆ. ಗರಿಷ್ಠ 5 ನಿಮಿಷ ಅವಧಿಯ ಭಾಷಣವು “ಶಾಂತಿ ಮತ್ತು ಮಾನವೀಯತೆ-ನನ್ನ ದೇಶ, ನನ್ನ ಪಾತ್ರ” ಅಥವಾ “My role in promoting Peace and Humanity in my country” ಎಂಬ ವಿಷಯದಲ್ಲಿ, ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತದೆ.
ಈಗಾಗಲೇ ನೋಂದಾವಣೆ ಮಾಡಿರುವ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗಹಿಸುವ ಅವಕಾಶವಿದ್ದು, ವಿದ್ಯಾರ್ಥಿಗಳ ಹೆಸರನ್ನು ಸಹಿ ಮತ್ತು ಶಾಲಾ ಮೊಹರಿನೊಂದಿಗೆ ಶಾಲಾ ಮುಖ್ಯೋಪಾಧ್ಯಾರು ದೃಡೀಕರಿಸಿರಬೇಕು ಎಂದು ಸ್ಪರ್ಧಾ ವಿಭಾಗದ ಸಂಚಾಲಕ ಉಮರ್ ಯು. ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.