ಜಿಲ್ಲೆಯ ಬಿಜೆಪಿ ಶಾಸಕರು ಸರ್ಕಾರದ ಕೆಲಸ, ಕಾರ್ಯಗಳಲ್ಲಿ ಕೈಜೋಡಿಸಲಿ – ವಿಕಾಸ್ ಹೆಗ್ಡೆ
ಕುಂದಾಪುರ: ಜಿಲ್ಲೆಯಲ್ಲಿ ಜನರಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಸರ್ಕಾರದ ಕೆಲಸ ಕಾರ್ಯದಲ್ಲಿ ಕೈಜೋಡಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗೃಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಉಡುಪಿ ಜಿಲ್ಲೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಹಿರಿಯ ಭೂ ವಿಜ್ಞಾನಿಗಳನ್ನು ನಿಯೋಜನೆ ಮಾಡಿ ಗಣಿಗಾರಿಕೆಯಲ್ಲಿನ ಅಕ್ರಮವನ್ನು ಹತೋಟಿಗೆ ತಂದು ಸಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದರ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ರಾಜಧನ ಸಂಗ್ರಹ ಮಾಡುವುದರ ಮೂಲಕ ಹಿಂದೆ ಅಕ್ರಮ ಗಾಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ಕೋಟ್ಯಂತರ ರೂಪಾಯಿ ನಷ್ಟವನ್ನು ಕಡಿಮೆ ಮಾಡಿದೆ.
ಇವತ್ತು ಬಿಜೆಪಿ ಜನಪ್ರತಿನಿಧಿಗಳು ಇಂತಹ ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯವನ್ನು ಟೀಕಿಸುವುದು ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತೆ. ಕಾಂಗ್ರೆಸ್ ಸರ್ಕಾರ ಜನಪರವಾಗಿದ್ದು ಜನರ ಅಗತ್ಯತೆಗಳನ್ನು ಕಾನೂನುಬದ್ಧ ವಾಗಿ ಪೂರೈಸಲು ಕಾಂಗ್ರೆಸ್ ಸರ್ಕಾರ ಯಾವತ್ತೂ ಸಿದ್ಧವಿದೆ ಅದನ್ನಾ ಬಿಟ್ಟು ಅಧಿಕಾರಿಗಳಿಂದ ತಪ್ಪನ್ನು ಮಾಡಿಸಲು ಕಾಂಗ್ರೆಸ್ ಸರ್ಕಾರ ಯಾವತ್ತೂ ಸಿದ್ದವಿಲ್ಲ. ಈಗಾಗಲೇ ಉಸ್ತುವಾರಿ ಸಚಿವರು ಕೆ ಡಿ ಪಿ ಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿರುತ್ತಾರೆ. ಸರ್ಕಾರದ ಭಾಗವಾಗಿರುವ ಜಿಲ್ಲೆಯ ಶಾಸಕರುಗಳು ಕೇವಲ ಸರ್ಕಾರವನ್ನು ಟೀಕಿಸುವುದು ಮಾತ್ರ ತಮ್ಮ ಕರ್ತವ್ಯವೆಂದು ತಿಳಿಯದೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಜೊತೆ ಕೈಜೋಡಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.