ಜಿಲ್ಲೆಯ ಶಾಂತಿ ಸುವ್ಯವಸ್ಥೆಯ ದೃಷ್ಟಿಯಿಂದ ಬೈಕ್ ಜಾಥಾಗೆ ಅನುಮತಿ ನೀಡಿಲ್ಲ: ರಮಾನಾಥ ರೈ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಸೂಕ್ಷ್ಮ ಜಿಲ್ಲೆಯಾಗಿದ್ದು, ಈಗಾಗಲೇ ಹಲವಾರು ಕೋಮು ಸಂಬಂಧಿತ ಘಟನೆಗಳು ನಡೆದ ಹಿನ್ನಲೆಯಲ್ಲಿ ಬೇರೆ ಜಿಲ್ಲೆಗಳಿಂದು ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಬರುವುದದರಿಂದ ಗಲಭೆಗಳು ಸಂಭವಿಸುವ ಸಾಧ್ಯತೆ ಇದ್ದು, ಜಿಲ್ಲೆಯ ಶಾಂತಿ ಸುವ್ಯವಸ್ಥೆ ಹಾಗೂ ಕಾನೂನು ಪಾಲನೆ ದೃಷ್ಟಿಯಿಂದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪರವಾನಿಗೆಯನ್ನು ನೀಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಿವಿಧ ಜಿಲ್ಲೆಗಳಿಂದ ಬೈಕ್ ಮೂಲಕ ಜಾಥಾ ನಡೆಸುವ ಸಂದರ್ಭ ಸುಗಮ ಸಂಚಾರಕ್ಕೆ ವ್ಯವಸ್ಥೆಯ ಜೊತೆಗೆ ಏನಾದರೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಆಯಾಜಿಲ್ಲೆಯಲ್ಲಿ ಕಾನೂನಿನ ಪರಿಪಾಲನೆ ಮಾಡುವ ಹೊಣೆಗಾರಿಕೆ ಪೋಲಿಸರದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಯಾವುದೇ ಪ್ರತಿರೋಧ ಇರುವುದಿಲ್ಲ ಆದರೆ ವಿವಿ ಜಿಲ್ಲೆಗಳಿಂದ ಜಾಥಾ ನಡೆಸುವುದರಿಂದ ಅಹಿತಕರ ಘಟನೆ ಆದಲ್ಲಿ ಅದು ಸರಕಾರದ ಮೇಲೆ ಪರಿಣಾಮ ಬೀರುತ್ತದೆ. ಜಿಲ್ಲೆಯಲ್ಲಿ ಕೇವಲ ಸಂಘ ಪರಿವಾರದವರ ಹತ್ಯೆ ಮಾತ್ರ ನಡೆದಿಲ್ಲ ಅದರ ಜೊತೆಯಲ್ಲಿ ಕಳೆದ 15 ವರ್ಷಗಳಿಂದ ಅಲ್ಪಸಂಖ್ಯಾತರು, ಹಿಂದೂಗಳು ಸೇರಿದಂತೆ ಸಾಕಷ್ಟು ಅಮಾಯಕರ ಹತ್ಯೆ ಕೂಡ ನಡೆದಿದೆ ಎಂದರು.
ನಾವು ನಡೆಸುತ್ತಿರುವ ಸಾಮರಸ್ಯದ ನಡಿಗೆ ಯಾವುದೇ ಪಕ್ಷದಿಂದ ನಡೆಯುತ್ತಿಲ್ಲ ಬದಲಾಗಿ ಇತ್ತೀಚೆಗೆ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಬಂಟ್ವಾಳದಲ್ಲಿ ನಡೆದ ಕೋಮು ಸಂಘರ್ಷದ ಸಂದರ್ಭ ಶಾಂತಿ ಪ್ರಿಯ ನಾಗರಿಕರಿಂದ ಬಂದ ಬೇಡಿಕೆಯ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವನ ನೆಲೆಯಲ್ಲಿ ನಡೆಸಲು ಮುಂದಾಗಿದ್ದು, ಇದರಲ್ಲಿ ಹತ್ಯೆಯಲ್ಲಿ ಭಾಗಿಯಾದ ಸಂಘಟನೆಗಳನ್ನು ಹೊರತುಪಡಿಸಿ, ಜಿಲ್ಲೆಯ ನಾಗರಿಕರು, ಚಿಂತಕರು, ಬುದ್ದಿಜೀವಿಗಳನ್ನು ಒಟ್ಟು ಸೇರಿಸಿ ಒಂದು ಸೀಮಿತ ಪ್ರದೇಶದಲ್ಲಿ ನಡೆಸಲಾಗುತ್ತದೆ ಎಂದರು.
ಇದೇ ವೇಳೆ ಮಾತನಾಡಿ ಆಹಾರ ಸಚಿವ ಯು ಟಿ ಖಾದರ್ ಅವರು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು ಯಾಕೆ ಕೆಎಫ್ ಡಿ ಹಾಗೂ ಪಿಎಫ್ ಐ ಸಂಘಟನೆ ನಿಷೇಧಿಸಲು ಸಾಧ್ಯವಾಗಿಲ್ಲ. ನಾವು ಚುನವಾಣೆಗೆ ನಿಂತ ಸಮಯದಲ್ಲಿ ನಮ್ಮ ಎದುರು ಬಿಜೆಪಿಯವರು ಎಸ್ ಡಿ ಪಿ ಐ ಪಕ್ಷದವರನ್ನು ನಿಲ್ಲಿಸಲು ನಮ್ಮನ್ನು ಸೋಲಿಸಲು ಪ್ರಯತ್ನಿಸಿದ್ದರು. ರಾಜಕೀಯ ಲಾಭಕ್ಕಾಗಿ ಬಿಜೆಪಿ ಎಸ್ ಡಿ ಪಿಐ ನಾಯಕರನ್ನು ಬಳಸಿಕೊಳ್ಳೂತ್ತಿದೆ ಎಂದ ಖಾದರ್ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡಲು ಯಾವುದೇ ತ್ಯಾಗಕ್ಕೂ ಸಿದ್ದ ಎಂದರು.