ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸುವ ವಿಶ್ವಾಸ – ಜನಾರ್ದನ ತೋನ್ಸೆ
ಉಡುಪಿ: ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಆಧಾರದಲ್ಲಿ ಕಾಂಗ್ರೆಸ್ ಪಕ್ಷ ಮತಾಯಾಚನೆ ಮಾಡುತ್ತಿದೆ. ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ಆದ ಅಸ್ಥಿರ ಸರಕಾರ ಹಾಗೂ ಭ್ರಷ್ಟಾಚಾರ ಪ್ರಕರಣಗಳನ್ನು ಮತದಾರರಿಗೆ ಮನವರಿಕೆ ಮಾಡುವುದರೊಂದಿಗೆ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಸಾಧನೆಗಳನ್ನು ತಿಳಿಸಿ ಮತದಾರರ ಮನವೊಲಿಸುವಲ್ಲಿ ಕಾರ್ಯಕರ್ತರು ಸಂಘಟಿತರಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಮತದಾರರು ಸರಕಾರದ ಜನಪರ ಕಾಳಜಿ ಹಾಗೂ ಜನೋಪಯೋಗಿ ಕಾರ್ಯಕ್ರಮಗಳನ್ನು ಪರಿಗಣಿಸಿ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಹೇಳಿದ್ದಾರೆ.
ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷದ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈಗಾಗಲೇ ಮತದಾರರು ಕಳೆದ ಬಿಜೆಪಿ ಸರಕಾರದ ಭ್ರಷ್ಟಾಚಾರದ ದುರಾಡಳಿತ ಕಂಡಿದ್ದು. ಸಿದ್ಧರಾಮಯ್ಯನವರ ನೇತೃತ್ವದ ಸರಕಾರದ ಅಭಿವೃದ್ಧಿ ಯೋಜನೆಗೆ ಜನತೆಯಿಂದ ಉತ್ತಮ ಸ್ಪಂದನೆ ದೊರಕಿದೆ. ಸಿದ್ಧರಾಮಯ್ಯನರವರ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್ಗೆ ಶ್ರೀರಕ್ಷೆಯಾಗಲಿದೆ. ರೈತರು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯೊಂದಿಗೆ ಕರ್ನಾಟಕವನ್ನು ದೇಶದಲ್ಲಿಯೇ ನಂ 1 ರಾಜ್ಯವನ್ನಾಗಿ ಕೊಂಡೊಯ್ಯುವತ್ತ ಗಮನ ಹರಿಸಿದ್ದು ದೇಶಕ್ಕೆ ಮಾದರಿಯಾದ ಆಡಳಿತವನ್ನು ನೀಡಿದ್ದು ಸಹಜವಾಗಿಯೇ ಜನರ ಬೆಂಬಲವನ್ನು ಗಳಿಸಿದೆ. ಬಿಜೆಪಿಯ ಅವಧಿಯಲ್ಲಿ ಅಸ್ಥಿರತೆ ಕಾಡುತ್ತಿತ್ತು ಸಮರ್ಥ ನಾಯಕತ್ವವೂ ಇರಲಿಲ್ಲ ಸ್ವಚ್ಚ ಆಡಳಿತವೂ ಇರಲಿಲ್ಲ. ಅನೇಕರು ಅನೇಕ ಹಗರಣಗಳಿಂದ ಜೈಲು ವಾಸ ಅನುಭವಿಸಿದ್ದರು ಆ ಕಾರಣದಿಂದಲೇ ಕಾಂಗ್ರೆಸ್ ಪಕ್ಷ ಸಮರ್ಥ ನಾಯಕತ್ವ-ಸ್ವಚ್ಚ ಆಡಳಿತ ಎಂದು ಘೋಷಣೆ ಮಾಡಿತ್ತು. ಅದರಲ್ಲಿ ಯಶಸ್ವಿಯೂ ಆದ ಸಮಾಧಾನವೂ ಇದೆ. ರಾಜ್ಯ ಸರಕಾರದ ಈ 5 ವರ್ಷಗಳ ಅವಧಿಯಲ್ಲಿ ಕೈಗೊಂಡ ಆರ್ಥಿಕ ಆಡಳಿತಾತ್ಮಕ ಮತ್ತು ಸಾಮಾಜಿಕ ಸುಧಾರಣ ಕಾರ್ಯಕ್ರಮಗಳನ್ನು ಜನರು ಸ್ವೀಕರಿಸಿದ್ದು ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಪೂರಕವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಅತ್ಯಧಿಕ ಬಹುಮತದೊಂದಿಗೆ ಜಯಗಳಿಸಲಿದ್ದಾರೆ ಎಂದು ಜನಾರ್ದನ ತೋನ್ಸೆ ಹೇಳಿದ್ದಾರೆ.