ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ: ಸಂಸದ ಕ್ಯಾ. ಚೌಟ

Spread the love

ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ: ಸಂಸದ ಕ್ಯಾ. ಚೌಟ

  • ಹಸುವಿನ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒತ್ತಾಯ

ಮಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನೇ ಕೊಯ್ದು ಪೈಶಾಚಿಕ ಕೃತ್ಯ ಎಸಗಿದ ಹೇಯ ಕೃತ್ಯವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದು, ಹಸುವಿನ ಕೆಚ್ಚಲು ಕತ್ತರಿಸಿರುವುದು ಹೆತ್ತ ತಾಯಿಯ ಕತ್ತು ಕೊಯ್ಯುವುದು ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೃತ್ಯ ಎಸಗಿದ ಆರೋಪಿಗೆ ಮಾನಸಿಕವಾಗಿ ಅಸ್ವಸ್ಥ ಪಟ್ಟ ಕಟ್ಟಿ ಪ್ರಕರಣವನ್ನು ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಲು ಹೊರಟಿರುವ ಮೂಲಕ ಜಿಹಾದಿ ಮಾನಸಿಕತೆಯನ್ನು ಪೋಷಿಸಿ ಬೆಳೆಸುತ್ತಿರುವುದು ಮತ್ತಷ್ಟು ಖೇದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗೋವು ಎನ್ನುವುದು ಸನಾತನ ಧರ್ಮಿಯರಿಗೆ ಮಾತೃ ಸ್ವರೂಪಿಣಿಯಾಗಿದ್ದು, ಗೋವಿನಲ್ಲಿ ಮುಕ್ಕೋಟಿ ದೇವರನ್ನು ಕಂಡು ಆರಾಧನೆ ಮಾಡುತ್ತೇವೆ. ಗೋವಿನ ಹಾಲನ್ನು ನಾವು ಅಮೃತಕ್ಕೆ ಸಮನಾದ ತಾಯಿ ಎದೆಹಾಲಿಗೆ ಹೋಲಿಸುತ್ತೇವೆ. ಇಂತಹ ಕಾಮಧೇನು ಬರೀ ಹಿಂದುಗಳಿಗೆ ಮಾತ್ರ ಹಾಲು ಕೊಡುವುದಿಲ್ಲ. ಜಾತಿ, ಮತ, ಧರ್ಮ ಬೇಧವಿಲ್ಲದೇ ಕ್ಷೀರಧಾರೆಯನ್ನು ಹರಿಸುವ ಗೋಮಾತೆಯ ಕೆಚ್ಚಲು ಕತ್ತರಿಸುತ್ತಾರೆಂದರೆ ಎಂಥ ವಿಕೃತ ಮನಸ್ಥಿತಿಯಿರಬಹುದು. ಈ ಘಟನೆ ವಿರುದ್ದ ರಾಜ್ಯವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿಯನ್ನು ತರಾತುರಿಯಲ್ಲಿ ಬಂಧಿಸಿರುವುದು ನೋಡಿದರೆ ಸರ್ಕಾರದ ನಡೆಯೇ ಅನುಮಾನ ಹುಟ್ಟಿಸುವಂತಿದೆ. ನೀಚ ಕೃತ್ಯ ಎಸಗಿದ ಆ ದುಷ್ಟ ಮಾನಸಿಕ ಅಸ್ವಸ್ಥ ನಾಗಿದ್ದರೆ ಆತ ಹಸುವಿನ ಕೆಚ್ಚಲನ್ನೇ ಗುರುತಿಸಿ ಕೊಯ್ಯಲು ಹೇಗೆ ಸಾಧ್ಯ ಎಂದು ಗೋ ಮಾಲಕರೇ ಸಂಶಯ ವ್ಯಕ್ತಪಡಿಸಿದ್ದಾರೆ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಅಸಹ್ಯ ಮನಸ್ಥಿತಿಯ ಆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಭಯ ಹುಟ್ಟಿಸುವ ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಕಾಂಗ್ರೆಸ್ ನೇತೃತ್ವದ ಮೃದು ಧೋರಣೆಗಳನ್ನು ತಾಳುತ್ತಿರುವುದು ಹೊಸದಲ್ಲ. ಕೆಎಫ್‌ಡಿ, ಪಿಎಫ್ಐನಂತಹ ದೇಶದ್ರೋಹಿ ಸಂಘಟನೆ ವಿರುದ್ದ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಜಿಹಾದಿ ಮಾನಸಿಕತೆಯನ್ನು ಬೆಳೆಸಿ ಪೋಷಿಸಿದ ಪ್ರತಿಫಲವಿದು. ಒಂದೆಡೆ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮಿತಿಮೀರಿದ ಹಿನ್ನೆಲೆ ನಿರಂತರ ಗೋಹತ್ಯೆ ಆಗುತ್ತಿದೆ. ಮತ್ತೊಂದೆಡೆ ಗೋ ಕಳ್ಳರ ಅಟ್ಟಹಾಸ ರಾಜಾರೋಷವಾಗಿ ನಡೆಯುತ್ತಿದ್ದು, ಹಟ್ಟಿಯಿಂದಲೇ ದನ ಕಳ್ಳತನವಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ದಿನದಿಂದ ಸಮಾಜಘಾತುಕ ಕೃತ್ಯಗಳು ಹೆಚ್ಚಿವೆ. ಸರ್ಕಾರಕ್ಕೆ ಕಿಂಚಿತ್ತಾದರೂ ಗೋಮಾತೆಯ ಮೇಲೆ ಗೌರವವಿದ್ದರೆ ಈ ರಾಕ್ಷಸಿ ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕ್ಯಾ. ಚೌಟ ಅವರು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments