ಜಿ.ಎಸ್.ಟಿ 21ನೇ ಶತಮಾನದ ಅತೀ ದೊಡ್ಡ ಹುಚ್ಚುತನ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ದೇಶದಲ್ಲಿ ಜಾರಿಗೊಳಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ೨೧ನೇ ಶತಮಾನದ ಅತಿದೊಡ್ಡ ಹುಚ್ಚುತನ ಎಂದು ಹಿರಿಯ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರ ಲೇವಡಿ ಮಾಡಿದ್ದಾರೆ.
ಭಾರತ ೨೦೩೦ ವೇಳೆಗೆ ಸೂಪರ್ ಪವರ್ ಆಗಬೇಕಾದರೆ ದೇಶ ವಾರ್ಷಿಕ ಶೇ. ೧೦ ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದ ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ನೀಡಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೈದರಾಬಾದ್‌ನಲ್ಲಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಡಾ. ಸ್ವಾಮಿ, ದೇಶವು ಕಾಲಕಾಲಕ್ಕೆ ಶೇ. 8 ಬೆಳವಣಿಗೆಯನ್ನು ಸಾಧಿಸಿದ್ದರೂ, ಕಾಂಗ್ರೆಸ್ ನಾಯಕ ಪಿ ವಿ ನರಸಿಂಹರಾವ್ ತಂದಿರುವ ಸುಧಾರಣೆಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಚಾರದ ವಿರುದ್ದ ಹೋರಾಟ ನಡೆಸಬೇಕಿದೆ. ಹೂಡಿಕೆ ಮಾಡುವವರಿಗೆ ಪ್ರೋತ್ಸಾಹ ಕಲ್ಪಿಸಬೇಕು. ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆಯಿಂದ ಹೂಡಿಕೆದಾರರಿಗೆ ಭಯ ಸೃಷ್ಟಿಸಬಾರದು ಎಂದು ಸಲಹೆ ನೀಡಿದರು.
ಜಿ ಎಸ್ ಟಿ ೨೧ ನೇ ಶತಮಾನದ ಅತಿದೊಡ್ಡ ಹುಚ್ಚು. ಈ ಜಿಎಸ್ಟಿ ತುಂಬಾ ಜಟಿಲವಾಗಿದೆ. ಅದನ್ನು ಯಾವ ರೂಪದಲ್ಲಿ ತುಂಬಬೇಕು ಎಂದು ಯಾರಿಗೂ ಅರ್ಥವಾಗುವುದಿಲ್ಲ “ಎಂದು ಸ್ವಾಮಿ ವಿಶ್ಲೇಷಿಸಿದರು.
ತೆರಿಗೆ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಬೇಕೆಂದು ಅವರು( ಸರ್ಕಾರ) ಬಯಸುತ್ತಿದ್ದಾರೆ. ರಾಜಸ್ಥಾನ ಕೆಲವರು ತಮ್ಮ ಬಳಿ “ನಮಗೆ ವಿದ್ಯುತ್ ಇಲ್ಲ … ನಾವು ಹೇಗೆ ಅದನ್ನು ಕಂಪ್ಯೂಟರ್ ಗೆ ಅಪ್‌ಲೋಡ್ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಮೊದಲು ಅದನ್ನು ನಿಮ್ಮ ತಲೆಗೆ ಅಪ್‌ಲೋಡ್ ಮಾಡಿಕೊಂಡು ನಂತರ ಪ್ರಧಾನಮಂತ್ರಿ ಬಳಿಗೆ ಹೋಗಿ ಹೇಳಿ ಎಂದು ಸಲಹೆ ನೀಡಿದ್ದಾಗಿ ಹೇಳಿದರು.
ಭಾರತ ಆರ್ಥಿಕವಾಗಿ ಸೂಪರ್ ಪವರ್ ಆಗಬೇಕಾದರೆ ಮುಂದಿನ ೧೦ ವರ್ಷಗಳ ಕಾಲ ಶೇ. ೧೦ ಬೆಳವಣಿಗೆ ದಾಖಲಿಸಬೇಕು ಎಂದರು.
ಈ ರೀತಿಯ ಬೆಳವಣಿಗೆ ಮುಂದುವರಿದರೆ ಚೈನಾವನ್ನು ಹಿಂದಿಕ್ಕಿ ೫೦ ವರ್ಷಗಳಲ್ಲಿ ನಂ. ಒನ್ ಸ್ಥಾನದಲ್ಲಿರುವ ಅಮೆರಿಕಾಗೆ ಸವಾಲು ಹಾಕಬಹುದು ಎಂದು ಡಾ. ಸ್ವಾಮಿ ವಿವರಿಸಿದರು.
ದೇಶ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗೆ ಬೇಡಿಕೆ ಕೊರತೆ ಕಾರಣವಾಗಿದೆ. ಜನರ ಬಳಿ ಖರ್ಚು ಮಾಡಲು ಹಣವಿಲ್ಲ, ಹೀಗಾಗಿ ದೇಶದ ಆರ್ಥಿಕತೆಯ ಬೆಳವಣಿಗೆಗೆ ಅಡಚಣೆಯಾಗಿದೆ ಎಂದರು.
ಸರ್ಕಾರ ಶೇಕಡಾ ೧೦ ರಷ್ಟು ಬೆಳವಣಿಗೆಯ ದರವನ್ನು ಬಯಸಿದರೆ ಹೂಡಿಕೆ ದರ ಜಿಡಿಪಿ ಶೇಕಡಾ ೩೭ ಆಗಿರಬೇಕು. ಈಗಿನಂತೆ ಶೇ. ೫ ರಷ್ಟು ಇರಬಾರದು” ಎಂದು ಹೇಳಿದರು, ಆದಾಯ ತೆರಿಗೆಯನ್ನು ರದ್ದುಗೊಳಿಸಿ. ಭ್ರಷ್ಟಾಚಾರ ತೊಡೆದು ಹಾಕಿದರೆ ಹೆಚ್ಚಿನ ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದರು.
ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದ ಅವರು, ರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ೧೯೯೦ ರಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದ್ದರು ಎಂದರು.
ಪಿವಿ ನರಸಿಂಹರಾವ್ ಆಡಳಿತದ ನಂತರ, ದೇಶ ಕಾಲಕಾಲಕ್ಕೆ ಶೇ. ೮ರ ಬೆಳವಣಿಗೆ ಸಾಧಿಸಿದೆ. ಆದರೆ ನರಸಿಂಹ ರಾವ್ ತಂದ ಸುಧಾರಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
ನೀರಾವರಿ ಸೌಲಭ್ಯಗಳ ಕೊರತೆಯಿಂದಾಗಿ ದೇಶದಲ್ಲಿ ಎಕರೆವಾರು ಕೃಷಿ ಇಳುವರಿ ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಸ್ವಾಮಿ ಹೇಳಿದರು.